ನಕಲಿ ಔಷಧಿ ಜಾಲ, ಆಹಾರ ಕಲಬೆರಕೆ ಪತ್ತೆಗೆ ಕಾವಲು ಪಡೆ: ಸಚಿವ ಯು.ಟಿ. ಖಾದರ್

ನಕಲಿ ಔಷಧಿ ಜಾಲ, ಆಹಾರ ಕಲಬೆರಕೆ ಪತ್ತೆಗೆ ಕಾವಲು ಪಡೆ: ಸಚಿವ ಯು.ಟಿ. ಖಾದರ್


ಮಂಗಳೂರು: ನಕಲಿ ಔಷಧಿ ಜಾಲ ಹಾಗೂ ಆಹಾರ ಕಲಬೆರಕೆ, ಸ್ವಚ್ಛತೆಗೆ ಸಂಬಂಧಿಸಿ ಜನರಲ್ಲಿ ಜಾಗೃತಿ ಮೂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಸಾರ್ವಜನಿಕವಾಗಿ ಜಾಗೃತಿ ಮೂಡಿಸಲು ನಿವೃತ್ತ ಹಾಗೂ ಪರಿಣಿತ ಹಿರಿಯ ನಾಗರಿಕರನ್ನು ಒಳಗೊಂಡ ಕಾವಲು ಪಡೆ (ವಾಚ್ ಟೀಂ)ಯನ್ನು ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಗುರುತಿಸಿ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತವಾರಿ ಹಾಗೂ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಥಿಯಲ್ಲಿ ಮಾತನಾಡಿದ ಅವರು, ಈ ನಕಲಿ ಜಾಲ ಪತ್ತೆ ಹಾಗೂ ಆಹಾರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರದ ಜತೆಗೆ ಜಾಗೃತಿ ಅಗತ್ಯವಾಗಿದೆ ಎಂದರು. 

ನಕಲಿ ಔಷಧ ಜಾಲ ಗಂಭೀರವಾಗಿದ್ದು, ಇದೊಂದು ದೊಡ್ಡ ಮಾಫಿಯಾ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಅನಧಿಕೃತ ಕಂಪನಿಗಳಿಂದ ಪೂರೈಕೆಯಾಗುತ್ತಿದೆ. ರಾಜ್ಯದ ಉದ್ದಗಲಕ್ಕೂ ಜನೌಷಧಿ ಸೇರಿದಂತೆ ದಾಳಿ ಮುಂದುವರಿದಿದೆ. ಆಹಾರ ಸುರಕ್ಷತೆಗೆ ಸಂಬಂಧಿಸಿ ಫೈಸ್ಟಾರ್ ಹೊಟೇಲ್ನಿಂದ ಹಿಡಿದು ತಳಮಟ್ಟದ ಬೀದಿ ಬದಿ ಆಹಾರ ಮಳಿಗೆಗಳಿಗೂ ದಾಳಿ ಮುಂದುವರಿಯುತ್ತಿದೆ. ಜನರು ದೂರು ನೀಡಿ ಕ್ರಮ ಆದಾಗ ಬದಲಾವಣೆ ಸಾಧ್ಯವಾಗುತ್ತದೆ. ದಾಳಿ ಅಥವಾ ಪರಿಶೀಲನೆಯ ಉದ್ದೇಶ ಯಾರಿಗೂ ಶಿಕ್ಷೆ ನೀಡುವುದಲ್ಲ. ಬದಲಿಗೆ ಅವರ ತಪ್ಪನ್ನು ತೋರಿಸಿ ಸರಿಪಡಿಸಲು ಅವಕಾಶ ನೀಡುವುದು. ಸದ್ಯ ದಾಳಿ ನಡೆಸಲಾಗಿರುವ ಎಲ್ಲಾ ಕಡೆಗಳಲ್ಲೂ ನೋಟೀಸು ಕೊಟ್ಟು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು. 


ಕೃತಕ ಪನ್ನೀರ್, ಬಣ್ಣ, ಅಜಿನಮೊಟೊ ವಿರುದ್ಧ ಕ್ರಮ...

ಕೃತಕ ಪನ್ನೀರ್ ವಿಚಾರದಲ್ಲೂ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಸ್ಯಾಹಾರಿ ಆಹಾರದ ಬೇಡಿಕೆ ಹೆಚ್ಚಿರುವ ಕಡೆಗಳಲ್ಲಿ ಕೃತಕ ಪನ್ನೀರ್ ಬಳಕೆಯ ಬಗ್ಗೆ ದೂರುಗಳು ಬಂದಿದೆ, ರಾಜ್ಯದಲ್ಲಿ ಅದನ್ನು ನಿಷೇಧಿಸಲಾಗಿದೆ. ಕೃತಕ ಆಹಾರ ಪದಾರ್ಥಗಳ ವಿರುದ್ಧ ಕ್ರಮ ಮುಂದುವರಿಯಲಿದೆ. ಕೃತಕ ಬಣ್ಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಜಿನಮೊಟೊವನ್ನು ಸಂಪೂರ್ಣವಾಗಿ ನಿಷೇಧಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದಿದ್ದರೂ, ಅದರ ಬಳಕೆಯ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿಡನ್ ಅಜೆಂಡಾ..

ಪ್ರತಿಪಕ್ಷವಾದ ಬಿಜೆಪಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಅಧಿವೇಶನ ನಡೆಸಲು ಅಡ್ಡಿ ಪಡಿಸುವ ಮೂಲಕ ಜನರಿಗೆ ಸಾಮಾಜಿಕ ವಂಚನೆ ಮಾಡುತ್ತಿದ್ದು, ಇದರ ಹಿಂದೆ ಹಿಡನ್ ಅಜೆಂಡಾ ಇದೆ.  ರಾಜ್ಯದಲ್ಲಿ ಈಗಾಗಲೇ ಬರ, ಅತಿವೃಷ್ಟಿಯ ಸಮಸ್ಯೆ ಇದೆ. ಇಂತಹ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಇರುವ ವೇದಿಕೆಗೆ ಅಡ್ಡಿ ಪಡಿಸಿರುವ ಬಿಜೆಪಿಯನ್ನು ಜನತೆ ಕ್ಷಮಿಸುವುದಿಲ್ಲ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article