ಮೀನುಗಾರಿಕಾ ಋತು ಆರಂಭವಾದರೂ ಕಡಲಿಗಿಳಿಯದ ಬೋಟ್‌ಗಳು..
ಮಂಗಳೂರು: ಕರಾವಳಿ ಆರ್ಥಿಕತೆಯ ಜೀವನಾಡಿ ಮೀನುಗಾರಿಕೆ. ಮಳೆಗಾಲ ನಿಮಿತ್ತ ಕಳೆದ 61 ದಿನಗಳಿಂದ ಸ್ತಬ್ಧಗೊಂಡಿದ್ದ ಮೀನುಗಾರಿಕೆ ಮತ್ತೆ ಆರಂಭಗೊಂಡಿದೆ. ಕಡಲ ಮಕ್ಕಳು ಮತ್ಸ್ಯ ಭೇಟೆಗಾಗಿ ಕಡಲಿಗಿಳಿಯಲು ಸಜ್ಜಾಗಿದ್ದಾರೆ.
ಜೂನ್ ಮತ್ತು ಜುಲೈ ತಿಂಗಳ 61 ದಿನಗಳ ಯಾಂತ್ರೀಕೃತ ಮೀನುಗಾರಿಕಾ ನಿಷೇಧ ಅವಧಿ ಜುಲೈ 31ಕ್ಕೆ ಮುಕ್ತಾಯಗೊಂಡಿದ್ದು, ಆಗಸ್ಟ್ 1ರಿಂದ ಆಳ ಸಮುದ್ರದ ಋತು ಆರಂಭವಾಗಿದೆ. ಧಕ್ಕೆಗಳಲ್ಲಿ ಲಂಗರು ಹಾಕಿದ್ದ ದೋಣಿಗಳು ಈಗ ಮೀನುಗಾರಿಕೆಗೆ ತೆರಳಲು ಸಜ್ಜಾಗಿದ್ದು, ಮಂಗಳೂರು ಧಕ್ಕೆಯಲ್ಲಿ ಚಟುವಟಿಕೆ ಗರಿಗೆದರಿದೆ.
ನಿರ್ಬಂಧ ಅವಧಿಯಲ್ಲಿ ಬೋಟ್‌ಗಳ ರಿಪೇರಿ, ಬಣ್ಣ ಬಳಿಯುವುದು, ಬಲೆ ಸಿದ್ಧಗೊಳಿಸುವ ಕೆಲಸಗಳನ್ನು ಮುಗಿಸಿಕೊಂಡಿದ್ದ ಮೀನುಗಾರರು ಈಗ ಸಂಪೂರ್ಣ ಸನ್ನದ್ಧರಾಗಿದ್ದಾರೆ. ಮಂಗಳೂರು ಧಕ್ಕೆಯಲ್ಲಿ ನೋಂದಾಯಿತವಾಗಿರುವ 1,655 ಯಾಂತ್ರೀಕೃತ ದೋಣಿಗಳು ಹಾಗೂ 179 ಪರ್ಸೀನ್ ಬೋಟ್‌ಗಳು ಕಡಲಿಗಿಳಿಯಲು ಸಿದ್ಧವಾಗಿ ನಿಂತಿವೆ. ಪ್ರತಿಯೊಂದು ಬೋಟ್‌ಗಳಿಗೂ ಅಗತ್ಯವಿರುವ ಟನ್‌ಗ
ಟ್ಟಲೆ ಐಸ್ ತುಂಬಿಸಲಾಗುತ್ತಿದ್ದು, ಡೀಸೆಲ್ ಭರ್ತಿ ಮಾಡಿ ಮೀನುಗಳ ಬೇಟೆಗೆ ಆಳ ಸಮುದ್ರದತ್ತ ಮುಖ ಮಾಡಲು ಮೀನುಗಾರರು ಕಾತರರಾಗಿದ್ದಾರೆ. ಆರಂಭಿಕ ಹಂತದಲ್ಲಿ ಪ್ರಮುಖವಾಗಿ ಟ್ರಾಲರ್ ಬೋಟ್‌ಗಳು ಮೀನುಗಾರಿಕೆಗೆ ತೆರಳಲಿವೆ.
ಕಳೆದ ಬಾರಿ ಮಂಗಳೂರಿನ ಮೀನುಗಾರರಿಗೆ ಸಾಕಷ್ಟು ವರದಾನವಾಗಿತ್ತು. ಒಟ್ಟು 1,97,381 ಟನ್ ಅತ್ಯುತ್ತಮ ಮೀನಿನ ಇಳುವರಿ ದೊರೆತಿದ್ದು, ಬರೋಬ್ಬರಿ ರೂ. 3,850 ಕೋಟಿಗೂ ಅಧಿಕ ಮೌಲ್ಯದ ವಹಿವಾಟು ನಡೆದಿತ್ತು. ಈ ಬಾರಿಯೂ ಸಮುದ್ರ ರಾಜ ಉತ್ತಮ ಇಳುವರಿ ನೀಡಲಿದ್ದಾನೆ ಎಂಬ ಬಲವಾದ ನಂಬಿಕೆಯಲ್ಲಿ ಕರಾವಳಿಯ ಲಕ್ಷಾಂತರ ಮೀನುಗಾರ ಕುಟುಂಬಗಳು ಹಾಗೂ ಕಾರ್ಮಿಕರಿದ್ದಾರೆ. ಯಾಂತ್ರೀಕೃತ ದೋಣಿಗಳಿಗೆ ಉತ್ತೇಜನ ನೀಡಲು ಸರ್ಕಾರವು ಮಾರಾಟ ತೆರಿಗೆ ವಿನಾಯಿತಿ ನೀಡಿದ ರಿಯಾಯಿತಿ ದರದ ಡೀಸೆಲ್ ಬೆಂಬಲವನ್ನು ಮುಂದುವರೆಸಿದೆ. ಕಳೆದ ಬಾರಿಯ ಹಂಗಾಮಿನಲ್ಲಿ 1,218 ಯಾಂತ್ರೀಕೃತ ದೋಣಿಗಳು ಈ ಸೌಲಭ್ಯವನ್ನು ಪಡೆದುಕೊಂಡಿದ್ದವು. ಸರ್ಕಾರವೇ ನೇರವಾಗಿ ತೈಲ ಸಂಸ್ಕರಣಾಗಾರಗಳಿಗೆ ಈ ತೆರಿಗೆ ಮೊತ್ತವನ್ನು ಪಾವತಿಸುವುದರಿಂದ, ಮೀನುಗಾರರಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ಸಿಗುತ್ತಿದೆ.
ಎಚ್ಚರಿಕೆ..
ಮೀನುಗಾರಿಕೆ ಋತು ಆರಂಭವಾಗಿದೆಯಾದರೂ, ಸದ್ಯ ಚಂಡಮಾರುತ ಮತ್ತು ಭಾರಿ ಮಳೆಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ೧ರಿಂದ ೪ರವರೆಗೆ ಆಳ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಗುರುವಾರ 4-5 ಬೋಟ್‌ಗಳು ಕಡಲಿಗೆ ತೆರಳಲು ಯತ್ನಿಸಿದರೂ, ಅಳಿವೆ ಬಾಗಿಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಬಂದರಿಗೆ ಮರಳಿದೆ.
ಹವಾಮಾನ ವೈಪರೀತ್ಯ ಹಾಗೂ ಅಲೆಗಳ ಆರ್ಭಟ ಕೊಂಚ ಕಡಿಮೆ ಆಗುತ್ತಿದ್ದಂತೆಯೇ, 1,600ಕ್ಕೂ ಅಧಿಕ ಬೋಟ್ಗಳು ಒಂದೇ ಬಾರಿಗೆ ಕಡಲಿಗೆ ಧುಮುಕುವ ಮೂಲಕ ಮೀನುಗಾರಿಕಾ ಚಟುವಟಿಕೆಗಳು ಗರಿಗೆದರಲಿದೆ.