ನೇತ್ರಾವತಿ ನದಿ, ಪಶ್ಚಿಮ ಘಟ್ಟಗಳ ವಿನಾಶದ ವಿರುದ್ಧ ಜನಾಂದೋಲನ: ಜನಪ್ರತಿನಿಧಿಗಳಿಗೆ ಬಹಿರಂಗ ಪತ್ರ

ನೇತ್ರಾವತಿ ನದಿ, ಪಶ್ಚಿಮ ಘಟ್ಟಗಳ ವಿನಾಶದ ವಿರುದ್ಧ ಜನಾಂದೋಲನ: ಜನಪ್ರತಿನಿಧಿಗಳಿಗೆ ಬಹಿರಂಗ ಪತ್ರ

ಮಂಗಳೂರು: ನೇತ್ರಾವತಿ ನದಿ ಹಾಗೂ ಪಶ್ಚಿಮ ಘಟ್ಟಗಳ ಪರಿಸರ ವಿನಾಶದ ವಿರುದ್ಧ ಜನರನ್ನು ಜಾಗೃತಗೊಳಿಸಿ, ಒಗ್ಗೂಡಿಸಿ ಹೋರಾಟಕ್ಕೆ ಜನಾಂದೋಲನ ರೂಪ ನೀಡುವ ಉದ್ದೇಶದಿಂದ ‘ಪಶ್ಚಿಮ ಘಟ್ಟ -ನೇತ್ರಾವತಿ ಸಂರಕ್ಷಣೆ ಮತ್ತು ಸಂಶೋಧನಾ ವೇದಿಕೆ’ (ಡಬ್ಲ್ಯೂಜಿ-ಎನ್ಸಿಆರ್‌ಎ-) ವತಿಯಿಂದ ಜನಸಾಮಾನ್ಯರಿಂದ ಸಂಗ್ರಹಿಸಲಾದ ಬೃಹತ್ ಸಹಿ ಅಭಿಯಾನದ ಮೂಲಕ ಸಿದ್ದಗೊಂಡ ಬಹಿರಂಗ ಪತ್ರವನ್ನು ಆ.೧೫ರಂದು ಜನಪ್ರತಿನಿಧಿಗಳಿಗೆ ಸಲ್ಲಿಸಲಾಗುವುದು ಎಂದು ವೇದಿಕೆ ಸಂಚಾಲಕ ಆದಿತ್ಯ ತಿಳಿಸಿದರು.

ನೇತ್ರಾವತಿ ನದಿ ಹಾಗೂ ಪಶ್ಚಿಮ ಘಟ್ಟಗಳ ನಿರಂತರ ಪರಿಸರ ವಿನಾಶವನ್ನು ತಡೆಯುವ ನಿಟ್ಟಿನಲ್ಲಿ ನಾಗರಿಕರ ಧ್ವನಿಯನ್ನು ಒಗ್ಗೂಡಿಸಲು ಈ ಸಹಿ ಅಭಿಯಾನ ನಡೆಸಲಾಗಿದೆ. ಬಹಿರಂಗ ಪತ್ರವನ್ನು ರಾಜ್ಯದ ಪಶ್ವಿಮ ಘಟ್ಟ ಹಾಗೂ ಕರಾವಳಿ ಪ್ರದೇಶಕ್ಕೆ ಒಳಪಡುವ 10 ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಚಾಮರಾಜನಗರ, ಮೈಸೂರಿನ ಚುನಾಯಿತ ಜನಪ್ರತಿನಿಽಗಳಿಗೆ ಕಳುಹಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕರ್ನಾಟಕ ಸರ್ಕಾರದ ಇತ್ತೀಚಿನ ನಿರ್ಧಾರಗಳು ಪಶ್ಚಿಮ ಕರಾವಳಿಯ ಜನರ ಹಕ್ಕುಗಳು ಹಾಗೂ ಪಶ್ಚಿಮ ಘಟ್ಟಗಳ ಮೂಲ ಪ್ರದೇಶ ಮತ್ತು ಅದರ ತಪ್ಪಲಿನಲ್ಲಿ ವಾಸಿಸುವ ಜನರ ಬದುಕಿನ ಅವಶ್ಯಕತೆಗಳ ಕುರಿತು ಗಂಭೀರವಾದ ಅರಿವಿನ ಕೊರತೆಯನ್ನು ತೋರಿಸುತ್ತವೆ. ಈ ಸಮುದಾಯಗಳ ಜೀವನೋಪಾಯ ಸಂಪೂರ್ಣವಾಗಿ ಪಶ್ಚಿಮ ಘಟ್ಟಗಳ ಪರಿಸರ ಸಮತೋಲನದ ಮೇಲೆ ಅವಲಂಬಿತವಾಗಿದ್ದು, ಅದನ್ನು ಅತ್ಯಂತ ಅವೈಜ್ಞಾನಿಕ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ನೇತ್ರಾವತಿ ನದಿ ಮೂರು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ತುಳು ನಾಗರಿಕತೆಯ ಜೀವನಾಡಿಯಾಗಿದೆ. ಆದರೆ, ಇಂದು ‘ನೇತ್ರಾವತಿ ನದಿ ತಿರುವು ಯೋಜನೆ’ ಹಾಗೂ ನಂತರದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಎಂಬ ಹೆಸರಿನಲ್ಲಿ ಈ ನದಿಯನ್ನು ವ್ಯವಸ್ಥಿತವಾಗಿ ನಾಶಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಈ ಯೋಜನೆಗೆ ವಿರುದ್ಧವಾಗಿ ಸಾಕಷ್ಟು ವೈಜ್ಞಾನಿಕ ಸಾಕ್ಷ್ಯಗಳಿದ್ದರೂ, ಕಳೆದ 14 ವರ್ಷಗಳಿಂದ ಕರ್ನಾಟಕ ಸರ್ಕಾರ ಯೋಜನೆಯನ್ನು ಮುಂದುವರಿಸಿದ್ದು, ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಲಾಗಿದೆ. ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳಿಗೆ ಶಾಶ್ವತ ಹಾನಿಯನ್ನುಂಟು ಮಾಡಿದೆ. ನೇತ್ರಾವತಿ ನದಿ, ಪಶ್ಚಿಮ ಘಟ್ಟಗಳ ಜಲಾನಯನ ಪ್ರದೇಶಗಳನ್ನು ಸಂರಕ್ಷಿಸುವುದು, ಸ್ಥಳೀಯ ಸಮುದಾಯಗಳ ಸಬಲೀಕರಣ, ಪರಿಸರ ವಿನಾಶವನ್ನು ತಡೆಯುವುದು ನಮ್ಮ ಧ್ಯೇಯ. ಈ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು ಎಂದರು.

ವೇದಿಯ ಪ್ರಮುಖರಾದ ರಸಿಲ್, ಮುಝಾಮಿಲ್, ಗೌತಮ್, ಆರ್ಯನ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article