ನಮ್ಮ ಗುರು-ಹಿರಿಯವರ ತ್ಯಾಗ ಮತ್ತು ಬಲಿದಾನದ ಮಹತ್ವವನ್ನು ಅರಿಯಬೇಕು: ಎಸ್.ಎಲ್. ಭೋಜೇಗೌಡ
ಅವರು ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಅಶ್ರಯದಲ್ಲಿ ಭಗವತಿ ದೇವಸ್ಥಾನದ ಕೂಟಕ್ಕಳ ಸಭಾಂಗಣದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಇಂದಿನ ಸಮಾಜವನ್ನು ಕಟ್ಟುವಲ್ಲಿ ಯುವ ಜನತೆಯ ಪಾತ್ರ ಮಹತ್ತರವಾಗಿದೆ. ನಾಡು-ನುಡಿಗೆ, ಹೆತ್ತವರಿಗೆ, ಊರಿಗೆ ತಾವು ಕಲಿತ ವಿದ್ಯಾಸಂಸ್ಥೆಗೆ ಗೌರವ ತರವ ಕಾರ್ಯವನ್ನು ಮಾಡಬೇಕು ಎಂದು ಕರೆ ನೀಡಿದರು.
ನರೇಂದ್ರ ಎಲ್. ನಾಯಕ್ ಅವರು ತಮ್ಮ ಅಪಾರವಾದ ಪರಿಶ್ರಮದಿಂದ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಉತ್ತಮ ಸಮಾಜವನ್ನು ರೂಪಿಸುವಲ್ಲಿ ಅವರ ಪಾತ್ರತುಂಬ ಇದೆ. ನಾಯಕ್ ಅವರ ಬದಕು ಮತ್ತು ಸಾಧನೆಯನ್ನು ಒಮ್ಮೆ ನಾವೆಲ್ಲರೂ ಅವಲೋಕನ ಮಾಡಬೇಕು. ಅವರ ಶಿಸ್ತಿನಿಂದ, ಆದರ್ಶ, ತತ್ವ, ಶ್ರಮದಿಂದ ಶಿಕ್ಷಣಕ್ಕಾಗಿ ರಾಜ್ಯ ದೇಶಗಳಿಂದ ಅನೇಕ ಮಕ್ಕಳು ಇಂದು ಶಿಕ್ಷಣವನ್ನು ಕಲಿಯುಲು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಗೆ ಬರುತ್ತಿದ್ದಾರೆ. ನೀವೆಲ್ಲರೂ ಭಾಗ್ಯವಂತರು ಇಂದು ಅಪಾರವಾದ ಅವಕಾಶಗಳು ಇವೆ. ಆವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ವಿದ್ಯಾರ್ಥಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಭೋಜೇಗೌಡ ಕರೆ ನೀಡಿದರು.
ಆ ಮೂಲಕ ನಮ್ಮ ನಾಡುನುಡಿಗೆ ಸೇವೆಯನ್ನು ಸಲ್ಲಿಸಬೇಕು. ಡಿವಿಜಿ ಅವರು ಬಡತನದಲ್ಲಿಯೂ ಮಂಕುತಿಮ್ಮನ ಕಗ್ಗವನ್ನು ರಚಿಸುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಕವಿ ಗೋಪಾಲಕೃಷ್ಣ ಅಡಿಗರ ಕವನ, ಪುರಂದರದಾಸರ, ಕನಕದಾಸರ ಕೀರ್ತನೆಗಳನ್ನು ಹಾಡುವ ಮೂಲಕ ಮಕ್ಕಳಲ್ಲಿ ಹೊಸಹುರುಪನ್ನು ತಂದರು. ಭವಿಷ್ಯದಲ್ಲಿ ಕಲಿತ ಸಂಸ್ಥೆಯನ್ನು ಗುರುಗಳನ್ನು ಮರೆಯಬಾರದು. ಅಧುನಿಕತೆಯ ಭರಾಟೆಯಲ್ಲಿ ನಾವು ನಮ್ಮ ಮನೆಯ ಅಪ್ಪ-ಅಮ್ಮ-ಅಣ್ಣ, ಅಕ್ಕ-ತಂಗಿ ಹೀಗೆ ಎಲ್ಲ ಸಂಬಂಧಗಳನ್ನು ಕಳಚಿಕೊಳ್ಳುತ್ತಿದ್ದೇವೆ. ಇದು ಅಪಾಯಕಾರಿ. ಕೇವಲ ವಿದ್ಯೆಯೆಂಬ ಶಿಕ್ಷಣವನ್ನು ಮಾತ್ರ ಕಲಿಯುದಲ್ಲ ಅದರೊಂದಿಗೆ ಜೀವನದ ಸಂಬಂಧಗಳನ್ನು ಬೆಸೆಯುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ರಚನಾತ್ಮಕವಾಗಿ ಅವಳವಡಿಸಿಕೊಳ್ಳುವ ಮೂಲಕ ಶಿಕ್ಷಕರನ್ನು ಮತ್ತು ಸ್ನೇಹಿತರನ್ನು ಗೌರವಿಸುವುದು ಆ ಮೂಲಕ ಉತ್ತಮ ಪ್ರಜೆಯಾಗಿ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಅವರು ನೂತನವಾಗಿ ಆಯ್ಕೆಯಾದ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಭೋದಿಸುವ ಮೂಲಕ ವಿದ್ಯಾರ್ಥಿಗಳು ಭವ್ಯ ಭಾರತದಲ್ಲಿ ಉತ್ತಮ ಪ್ರಜೆಗಳಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಾಯಿರಾಜ್ ಘೋಗರೆ, ಕಾರ್ಯದರ್ಶಿಯಾಗಿ ಪ್ರಿಯಾನಾ ಪವನ ಬೇಕಲ್, ಜಂಟಿ ಕಾರ್ಯದರ್ಶಿಯಾಗಿ ಶ್ರೇಯಸ್ ಜಿ ಮತ್ತು ಸಾಧನಾ ಶೆಣೈ ಜಿ, ಶಿಸ್ತು ಬಾಲಕರ ವಿಭಾಗ ನಾಗಾನಂದನ್ ಬಿ.ಎಸ್, ಶಿಸ್ತು ಬಾಲಕಿಯರ ವಿಭಾಗ ಶ್ರಾವ್ಯ ವಿನಾಯಕ್ ಕಾಮತ್ ವಿದ್ಯಾರ್ಥಿಗಳು ಅಧಿಕಾರವನ್ನು ಸ್ವೀಕರಿಸಿದರು.
ವೇದಿಕೆಯಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್ ನಾಯಕ್, ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.