ಪ.ಗೋ. ಪ್ರಶಸ್ತಿ ಪ್ರದಾನ: ಪತ್ರಕರ್ತರ ಕನ್ನಡ ಭಾಷಾ ಬಳಕೆ ಅನುಕರಣೀಯ

ಪ.ಗೋ. ಪ್ರಶಸ್ತಿ ಪ್ರದಾನ: ಪತ್ರಕರ್ತರ ಕನ್ನಡ ಭಾಷಾ ಬಳಕೆ ಅನುಕರಣೀಯ


ಮಂಗಳೂರು: ದ.ಕ. ಜಿಲ್ಲೆಯ ಪತ್ರಕರ್ತರ ಕನ್ನಡ ಭಾಷಾ ಬಳಕೆ ಅನುಕರಣೀಯವಾಗಿದ್ದು, ಕನ್ನಡ ಭಾಷೆಯನ್ನು ಬೆಳೆಸುವ ಚಳವಳಿಯ ಭಾಗವಾಗಿಯೂ ಇಲ್ಲಿನ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ದ.ಕ. ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ 2026ನೆ ಸಾಲಿನ ಪ.ಗೋ. ಪ್ರಶಸ್ತಿಗೆ ಆಯ್ಕೆಯಾಗಿರುವ  ಪತ್ರಕರ್ತ ಸಂಶುದ್ದೀನ್ ಎಣ್ಮೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು

ಪ್ರಶಸ್ತಿಗೆ ಆಯ್ಕೆಯಾಗಿರುವ ಸಂಶುದ್ದೀನ್ ಅವರ ವಿಶೇಷ ವರದಿಯಲ್ಲೂ ಅವರು ಬಳಸಿರುವ ಭಾಷೆ, ಸರಕಾರವನ್ನು ಎಚ್ಚರಿಸುವ ಧಾಟಿ ಅತ್ಯುತ್ತಮವಾಗಿದೆ ಎಂದು ಹೇಳಿದ ಅವರು, ಜಿಲ್ಲೆಯ ಕನ್ನಡ ಪತ್ರಕರ್ತರ ಭಾಷಾ ಬಳಕೆಯು ಯಾವುದೇ ಸಂಶೋಧನೆಗಿಂತ ಕಡಿಮೆಯೇನಿಲ್ಲ. ಪ್ರತಿಬಾರಿಯೂ ಹೊಸ ಹೊಸ ಶಬ್ಧಗಳ ಪ್ರಯೋಗಗಳ ಮೂಲಕ ಅವರು ಅಚ್ಚರಿಗೊಳಿಸುತ್ತಾರೆ ಎಂದು ಹೇಳಿದರು. 

ಖಾಸಗೀಕರಣಕ್ಕೆ ಒಗ್ಗಿಕೊಂಡಿರುವ ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕ ಕ್ಷೇತ್ರದ ಯಾರಿಗೂ ಬೇಡವಾಗಿದೆ. ಜಿಲ್ಲೆಯಲ್ಲಿ ಮೂಲ ನಿವಾಸಿಗಳಾದ ಕೊರಗರು ಹಾಗೂ ಅವರಿಗಿಂತಲೂ ತಳಮಟ್ಟದ ಜೀವನ ಸಾಗಿಸುತ್ತಿರುವ ಸಾಕಷ್ಟು ಸಮುದಾಯ, ಕುಟುಂಬಗಳಿಗೆ ಈ ಸರಕಾರಿ ಸಂಸ್ಥೆಗಳು, ಶಿಕ್ಷಣ ಕ್ಷೇತ್ರಗಳು ಇಂದಿಗೂ ಆಶಾಕಿರಣವಾಗಿವೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವ ಕಾರ್ಯ ಪತ್ರಕರ್ತರಿಂದ ಆಗಬೇಕು ಎಂದು ಅವರು ಹೇಳಿದರು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಶುದ್ದೀನ್, ‘ಈ ಪ್ರಶಸ್ತಿಯು ಜವಾಬ್ಧಾರಿಯನ್ನು ಹೆಚ್ಚಿಸಿದೆ’ ಎಂದರು. 

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿಯವರು ಪದ್ಯಾಣ ಗೋಪಾಲ ಕೃಷ್ಣ (ಪ.ಗೋ.) ಅವರ ಜತೆಗಿನ ತನ್ನ ಒಡನಾಟವನ್ನು ಹಂಚಿಕೊಂಡರು. ಸೌಲಭ್ಯಗಳ ಕೊರತೆಗಳಿದ್ದ ಆ ಕಾಲದಲ್ಲಿ ಸುದ್ದಿಗೆ ಪಡುತ್ತಿದ್ದ ತಾಕಲಾಟ ಅದೆಷ್ಟಿತ್ತೆಂದರೆ ಒಂದು ಫೋಟೋಗಾಗಿ ಪೈಪೋಟಿ ಪಡಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಸರಳವಾಗಿ ಐಡಿಯಾಗಳನ್ನು ನೀಡುವುದರಲ್ಲಿ ನಿಸ್ಸೀಮರಾಗಿದ್ದ ಪ.ಗೋ, ತಮ್ಮ ವೃತ್ತಿಯಲ್ಲಿ ಎಂದಿಗೂ ಜಾತಿ, ಧರ್ಮ, ಭಾಷೆ ಬಗ್ಗೆ ವ್ಯತ್ಯಾಸ ಮಾಡಿದವರಲ್ಲ ಎಂದು ಚಿದಂಬರ ಬೈಕಂಪಾಡಿಯವರು ಹಳೆಯ ನೆನಪುಗಳನ್ನು ಪತ್ರಕರ್ತರೆದುರು ಬಿಚ್ಚಿಟ್ಟರು. 

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು. 

ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಕೋಶಾಧಿಕಾರಿ ವಿಜಯ್ ಕೋಟ್ಯಾನ್ ಪಡು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ ವಂದಿಸಿದರು. ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article