ವಂಚನೆ ಪ್ರಕರಣ: ಸೋಮನಾಥ ನಾಯಕ್, ರಂಜನ್ ರಾವ್ ವಿರುದ್ಧ ಪ್ರಕರಣ ದಾಖಲು

ವಂಚನೆ ಪ್ರಕರಣ: ಸೋಮನಾಥ ನಾಯಕ್, ರಂಜನ್ ರಾವ್ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಪಟ್ಟಾ ಜಾಗಕ್ಕೆ ಹೊಂದಿಕೊಂಡಿರುವ ಸರಕಾರಿ ಜಮೀನನ್ನು ಕುಮ್ಕಿ ಜಮೀನು ಎಂದು ಹೇಳಿ, ಅದನ್ನು ದರ್ಖಾಸ್ತು ಮಾಡಿಕೊಡುವುದಾಗಿ ನಂಬಿಸಿ 1 ಕೋಟಿ ರೂ.ಗೂ ಅಧಿಕ ಹಣ ಪಡೆದು ವಂಚಿಸಿರುವ ಆರೋಪದಡಿ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷ ಸೋಮನಾಥ್ ನಾಯಕ್ ಹಾಗೂ ರಂಜನ್ ರಾವ್ ಎರ್ಡೂರು ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರದ ಕೊಟ್ಟಾರ ಚೌಕಿ ನಿವಾಸಿ ಶಶಿಧರ ಅಚ್ಯುತ ತೋಟಂಟಿಲ (61) ನೀಡಿದ ದೂರಿನ ಆಧಾರದ ಮೇಲೆ ಆ.19ರಂದು ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ರಂಜನ್ ರಾವ್ ಎರ್ಡೂರು ಅವರ ಮಾಲಕತ್ವದ ಸರ್ವೇ ನಂ.85/3ಎರ 0.28.50 ಎಕರೆ ಜಮೀನಿಗೆ ಸಂಬಂಧಿಸಿದಂತೆ 2025ರ ಅ.4ರಂದು ಶಶಿಧರ ಹಾಗೂ ರಂಜನ್ ರಾವ್ ಎರ್ಡೂರು ನಡುವೆ ಕರಾರು ನಡೆದಿತ್ತು. ಸೋಮನಾಥ್ ನಾಯಕ್ ಅವರು ಈ ವ್ಯವಹಾರದಲ್ಲಿ ಮುಂದಾಳತ್ವ ವಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಜಮೀನಿಗೆ ಹೊಂದಿಕೊಂಡಿರುವ 0.70.25 ಎಕರೆ ಸರಕಾರಿ ಜಾಗವು ಕುಮ್ಕಿ ಜಮೀನಾಗಿದ್ದು, ಮುಂದೆ ಅದನ್ನು ದರ್ಖಾಸ್ತು ಮಾಡಿಸಿಕೊಂಡು ಒಟ್ಟು 0.98.75 ಎಕರೆ ಜಮೀನನ್ನು ನೋಂದಣಿ ಮೂಲಕ ಕ್ರಯ ಮಾಡಿ ಸ್ವಾಧೀನಕ್ಕೆ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಒಟ್ಟು 90 ಲಕ್ಷ ರೂ. ಗೆ ಕರಾರು ಮಾಡಿಕೊಂಡಿದ್ದು, ಬಳಿಕ ಸೋಮನಾಥ್ ನಾಯಕ್, ರಂಜನ್ ರಾವ್ ಎರ್ಡೂರು ಹಾಗೂ ಅವರು ಸೂಚಿಸಿದ ಇತರ ಬ್ಯಾಂಕ್ ಖಾತೆಗಳಿಗೆ ಸೇರಿ ಒಟ್ಟು 1 ಕೋಟಿ ರೂ. ಯಷ್ಟು ಹಣವನ್ನು ಪಾವತಿಸಲಾಗಿದೆ ಎಂದು ಶಶಿಧರ ದೂರಿನಲ್ಲಿ ತಿಳಿಸಿದ್ದಾರೆ.

ಈ ಪೈಕಿ 28 ಸೆಂಟ್ಸ್ ಕೃಷಿ ಜಮೀನನ್ನು 2026ರ ಮೇ 14ರಂದು ದಸ್ತಾವೇಜು ಸಂಖ್ಯೆ 693/2026-27ರಂತೆ ನೋಂದಣಿ ಮಾಡಿಕೊಡಲಾಗಿದೆ. ಆದರೆ ಉಳಿದ 0.70.25 ಎಕರೆ ಜಾಗವನ್ನು ದರ್ಖಾಸ್ತು ಮಾಡುವುದು ಕಷ್ಟಸಾಧ್ಯವೆಂದು ತಿಳಿದಿದ್ದರೂ, ಅತಿಕ್ರಮಿಸಿರುವ ಸರಕಾರಿ ಜಮೀನನ್ನು ಸೇರಿಸಿ ಒಟ್ಟು 0.98.75 ಎಕರೆ ಜಮೀನು ನೀಡುವುದಾಗಿ ಕರಾರು ಮಾಡಿಕೊಂಡು ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಜಾಗದ ದಾಖಲೆಗಳನ್ನು ಸರಿಪಡಿಸಲು ಹೆಚ್ಚಿನ ಹಣ ಬೇಕಾಗಬಹುದು ಎಂದು ಹೇಳಿ ಒಟ್ಟು 1,00,61,250 ರೂ. ಹಣವನ್ನು ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article