ರಾಮಭಕ್ತರ ಭಾವನೆಗೆ ಧಕ್ಕೆ ಆರೋಪ: ಸುಬ್ರಹ್ಮಣ್ಯದಲ್ಲಿ ಕಾಂಚನ್ ಹ್ಯುಂಡೈ ಬಹಿಷ್ಕಾರಕ್ಕೆ ಆಗ್ರಹ

ರಾಮಭಕ್ತರ ಭಾವನೆಗೆ ಧಕ್ಕೆ ಆರೋಪ: ಸುಬ್ರಹ್ಮಣ್ಯದಲ್ಲಿ ಕಾಂಚನ್ ಹ್ಯುಂಡೈ ಬಹಿಷ್ಕಾರಕ್ಕೆ ಆಗ್ರಹ


ಸುಬ್ರಮಣ್ಯ:  ಹ್ಯುಂಡೈ ಮಾಲಕ ಪ್ರಸಾದ್ ಕಾಂಚನ್ ಅವರು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ರಾಮಭಕ್ತರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಅವರ ಸಂಸ್ಥೆಯ ವಾಹನಗಳನ್ನು ಖರೀದಿಸದಂತೆ ರಾಮಭಕ್ತರು ಹಾಗೂ ಹಿಂದೂ ಬಾಂಧವರು ಆಗ್ರಹಿಸಿದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾರುಗಳ ಪ್ರದರ್ಶನಕ್ಕಾಗಿ ಕಾಂಚನ್ ಹ್ಯುಂಡೈ ವತಿಯಿಂದ ಸ್ಟಾಲ್ ಅಳವಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಟಾಲ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ ರಾಮಭಕ್ತರು ಹಾಗೂ ಸ್ಥಳೀಯ ಹಿಂದೂ ಬಾಂಧವರು, ಪ್ರಸಾದ್ ಕಾಂಚನ್ ಅವರ ಹಿಂದಿನ ಹೇಳಿಕೆಗಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು ಎಂದು ತಿಳಿಸಿದರು.

ಪ್ರಸಾದ್ ಕಾಂಚನ್ ಅವರು ರಾಮಭಕ್ತರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬ ರೀತಿಯಲ್ಲಿ ಮಾತನಾಡಿರುವುದು ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಈ ಕುರಿತು ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ದಿನೇಶ್ ಸಂಪ್ಯಾಡಿ, “ರಾಮಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಮಾತನಾಡಿರುವ ಪ್ರಸಾದ್ ಕಾಂಚನ್ ಅವರು ಈ ಬಗ್ಗೆ ಕ್ಷಮೆಯಾಚಿಸಬೇಕು. ಹಿಂದೂ ಸಮಾಜದ ಉದ್ಯಮಿಯಾಗಿ ಹಾಗೂ ಹ್ಯುಂಡೈ ಕಂಪೆನಿಯ ಡೀಲರ್ ಆಗಿರುವ ಅವರು ಸಮಾಜದ ಜನರ ಭಾವನೆಗಳನ್ನು ಗೌರವಿಸಬೇಕು. ಇಂತಹ ಹೇಳಿಕೆ ನೀಡಿರುವ ವ್ಯಕ್ತಿಯೊಂದಿಗೆ ಯಾವುದೇ ವ್ಯವಹಾರ ನಡೆಸಬಾರದು. ಕಾಂಚನ್ ಹ್ಯುಂಡೈ ಕಾರುಗಳನ್ನು ಖರೀದಿಸದೆ ಬಹಿಷ್ಕರಿಸಬೇಕು” ಎಂದು ಹೇಳಿದರು.

“ರಾಮಭಕ್ತರಿಗೆ ಚಪ್ಪಲಿ ಏಟು ನೀಡುವ ಮಾತು ಆಡಿರುವುದನ್ನು ಸಮರ್ಥಿಸುವ ಸಾಮರ್ಥ್ಯವಿದ್ದರೆ ಇಲ್ಲಿಗೆ ಬಂದು ಚಪ್ಪಲಿ ಏಟು ನೀಡಲಿ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಚನ್ ಹ್ಯುಂಡೈ ವತಿಯಿಂದ ಸುಬ್ರಹ್ಮಣ್ಯದಲ್ಲಿ ಕಾರು ಪ್ರದರ್ಶನಕ್ಕಾಗಿ ಸ್ಟಾಲ್ ಅಳವಡಿಸಿರುವ ಕುರಿತು ಪ್ರಶ್ನಿಸಿ, ರಾಮಭಕ್ತರು ಹಾಗೂ ಹಿಂದೂ ಬಾಂಧವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು. ಪ್ರಸಾದ್ ಕಾಂಚನ್ ಅವರ ಹೇಳಿಕೆಗಳಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಿ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಿನೇಶ್ ಸಂಪ್ಯಾಡಿ, ರಾಧಾಕೃಷ್ಣ ಆರವಾರ, ಶ್ರೀಕುಮಾರ್ ಬಿಲದ್ವಾರ, ಗಿರೀಶ್ ಆಚಾರ್ಯ ಪೈಲಾಜೆ, ಡಾ. ರವಿ ಕಕ್ಕೆಪದವು, ದಿಲೀಪ್ ಉಪ್ಪಳಿಕೆ, ಕಿರಣ್ ಪೈಲಾಜೆ, ಮನೋಜ್ ಸುಬ್ರಹ್ಮಣ್ಯ, ರಾಮಚಂದ್ರ ಅಗಲಳಿಕಜೆ, ಯಶೋಧಕೃಷ್ಣ ನೂಚಿಲ, ಚಿದಾನಂದ ಕಂದಡ್ಕ, ವೆಂಕಟೇಶ ಎಚ್.ಎಲ್., ಶೋಭಗಿರಿಧರ್ ಸ್ಕಂದ, ಜಯರಾಮ್ ಎಚ್.ಎಲ್., ಯಶವಂತ ಕೊಪ್ಪಳಗದ್ದೆ, ಮೋನಪ್ಪ ಮಾನಾಡು, ಮನೀಶ್ ಪದೇಲ, ಶೇಖರ್ ಅಗಳಿಕಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article