ಎರಡು ಪ್ರತ್ಯೇಕ ಕಳವು ಪ್ರಕರಣದ ಆರೋಪಿಗಳ ಬಂಧನ
ಒಂದು ಪ್ರಕರಣದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಬಾಗಲಕೋಟೆ ನಿವಾಸಿ ಅಲ್ತಾಫ್ ಹುಸೈನ್ ಎಂಬುವವನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಂದು ಪ್ರಕರಣದ ದೈವಸ್ಥಾನದ ಹುಂಡಿಯ ಹಣ ಕಳವು ಮಾಡಿದ್ದ ಉಡುಪಿ ತಾಲೂಕಿನ ಕುಕ್ಕಿಹಳ್ಳಿ ಗ್ರಾಮದ ನಿವಾಸಿ ಸುಖೇಶ್ ನಾಯ್ಕ್ (40) ಎಂಬುವವನನ್ನು ಬಂಧಿಸಲಾಗಿದೆ.
ಪ್ರಕಟಣದ ವಿವರ:
ಸರ ಕಳವು ಪ್ರಕರಣ:
ಜೂ.14 ರಂದು ಸೂಟರ್‌ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಮೀಪ ಮಹಿಳೆಯೊಬ್ಬರ ಬಂಗಾರದ ಸರವನ್ನು ಕಸಿದುಕೊಂಡು ಮೋಟಾರ್‌ಸೈಕಲ್‌ನಲ್ಲಿ ಪರಾರಿಯಾಗಿದ್ದ ಆರೋಪಿಗಳನ್ನು ಜೂ.26 ರಂದು ನಗರದ ಪಾಂಡೇಶ್ವರದ ರೋಸಾರಿಯೋ ಶಾಲೆ ಸಮೀಪ ಪ್ರಕರಣಕ್ಕೆ ಸಂಬಂಧಿಸಿದ ಮೂವರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂದರ್ಬದಲ್ಲಿ ಪ್ರಮುಖ ಆರೋಪಿ ಅಲ್ತಾಫ್ ಹುಸೈನ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಅವರನ್ನು ತಳ್ಳಿ ಪೊಲೀಸರ ವಶದಿಂದ ಪರಾರಿಯಾಗಿದ್ದನು. ಈತನನ್ನು ಆ.10 ರಂದು ವಿಜಯಪುರದಲ್ಲಿ ಬಂಧಿಸಲಾಗಿದೆ. ಈತನ ವಿರುದ್ಧ ರಾಜ್ಯದ ವಿವಿಧ ಭಾಗಗಳಲ್ಲಿ 6 ಪ್ರಕರಣಗಳು ದಾಖಲಾಗಿವೆ.
ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಉತ್ತರ ಪ್ರದೇಶ ರಾಜ್ಯದ ನಿವಾಸಿಗಳಾದ ರವಿ ಬೌರಾ ಮತ್ತು ಮೊಹಮ್ಮದ್ ಸಾಹೀಲ್ ಸಿದ್ದೀಖಿ ಯಾನೆ ಮೋಹಮ್ಮದ್ ಸಾಹಿಲ್ ಎಂಬುವವರನ್ನು ವಶಪಡಿಕೊಂಡಿದ್ದಾರೆ.
ದೈವಸ್ಥಾನ ಹುಂಡಿ ಪ್ರಕರಣ:
ಆ.5 ರಂದು ಬೆಳಗಿನ ಜಾವ ಸುಮಾರು 1.30 ಗಂಟೆಗೆ ಕಬ್ಬಿಣದ ಆಯುಧದಿಂದ ದೈವಸ್ಥಾನದ ಬಾಗಿಲು ಮತ್ತು ಕಿಟಕಿಯನ್ನು ಮುರಿದು ಒಳನುಗ್ಗಿ, ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಹೋಗಿದ್ದು, ಹುಂಡಿಯಲ್ಲಿದ್ದ ಸುಮಾರು 15,000 ರೂ. ನಗದು ಹಣವನ್ನು ಕಳವು ಮಾಡಿರುವುದಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈತನನ್ನು ಆ.10 ರಂದು ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದು, ಆ.11 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಯ ವಿರುದ್ಧ ದಸ್ತಗಿರಿ ವಾರಂಟ್‌ಗಳು ಇರುವುದೂ ಪತ್ತೆಯಾಗಿದೆ.