ಮನುಷ್ಯತ್ವ ಉಳಿಯಬೇಕಾದರೆ ಸಾಹಿತ್ಯ ಉಳಿಯಬೇಕು: ಡಾ. ಮಾನಸ ಕೀಳಂಬಿ
ಜಾಗತಿಕ ಬದಲಾವಣೆಗಳಿಗೆ ಅನುಗುಣವಾಗಿ ಸಾಹಿತ್ಯವೂ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಜನರಲ್ಲಿ ಸಮಯದ ಅಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಹಿತ್ಯ ಓದುವ ಹಾಗೂ ಅಭಿವ್ಯಕ್ತಿಸುವ ವಿಧಾನಗಳಲ್ಲೂ ಬದಲಾವಣೆಗಳಾಗುತ್ತಿವೆ. ಇಂದಿನ ದಿನಗಳಲ್ಲಿ ಸಾಹಿತ್ಯವು ಡಿಜಿಟಲ್ ಸ್ವರೂಪ ಪಡೆದುಕೊಂಡಿದ್ದು, ಇ-ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಹೆಚ್ಚಿನ ಓದುಗರನ್ನು ತಲುಪುತ್ತಿದೆ. ‘ಇ-ಸಾಹಿತ್ಯ ಇಂದಿನ ಕಾಲಘಟ್ಟದ ಅನಿವಾರ್ಯತೆ’ ಎಂದು ತಿಳಿಸಿದರು.
ವಿಶ್ವದ ವಿವಿಧ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿರುವ ಅಪರೂಪದ ಹಾಗೂ ಹಳೆಯ ಸಾಹಿತ್ಯ ಕೃತಿಗಳನ್ನೂ ಡಿಜಿಟಲ್ ಮೂಲಕ ಸುಲಭವಾಗಿ ಓದಲು ಸಾಧ್ಯವಾಗಿದೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಸಾಹಿತ್ಯ ಸೃಷ್ಟಿಸುವ ಅವಕಾಶವೂ ಇಂದು ದೊರೆತಿದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಮಾತ್ರ ಮಾನವ ಬದುಕು ಸಂಪೂರ್ಣವಾಗುವುದಿಲ್ಲ. ಮಾನವನ ಮನಸ್ಸಿನ ವಿಕಾರಗಳನ್ನು ಕಡಿಮೆ ಮಾಡಿ ಮಾನವೀಯತೆಯನ್ನು ಬೆಳೆಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಓದುವುದರಿಂದ ಸ್ಪಷ್ಟವಾಗಿ ಮಾತನಾಡುವ ಸಾಮರ್ಥ್ಯ ವೃದ್ಧಿಸುವುದರೊಂದಿಗೆ ಸಾಂಸ್ಕೃತಿಕ ಮೌಲ್ಯಗಳು ಮತ್ತು ಉತ್ತಮ ಚಿಂತನೆಗಳು ಬೆಳೆಯುತ್ತವೆ. ಸಾಹಿತ್ಯ ರಚನೆ ಹಾಗೂ ಓದಿಗೆ ಏಕಾಗ್ರತೆ ಮತ್ತು ಧ್ಯಾನಸ್ಥ ಮನಸ್ಸು ಅಗತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಉಪಪ್ರಾಂಶುಪಾಲೆ ಜಾನ್ಸಿ ಪಿ ಎನ್, ಕಲಾ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.
ಹಿಂದಿ ವಿಭಾಗದ ಉಪನ್ಯಾಸಕ ರಾಮಕೃಷ್ಣ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಡಿ.ವಿ. ಪ್ರಕಾಶ್ ಅತಿಥಿಗಳನ್ನು ಪರಿಚಯಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮಹೇಶ್ ವಂದಿಸಿದರು.
