ಸಾಮಾಜಿಕ ಸಾಮರಸ್ಯದ ಧ್ವನಿ: ದೇವದಾಸ್ ನುಡಿ ನಮನದಲ್ಲಿ ಮಾಜಿ ಸಚಿವ ರೈ ಅಭಿಪ್ರಾಯ

ಸಾಮಾಜಿಕ ಸಾಮರಸ್ಯದ ಧ್ವನಿ: ದೇವದಾಸ್ ನುಡಿ ನಮನದಲ್ಲಿ ಮಾಜಿ ಸಚಿವ ರೈ ಅಭಿಪ್ರಾಯ


ಮಂಗಳೂರು: ಸೌಮ್ಯ ನಡೆನುಡಿಯ ಪ್ರಬುದ್ಧ ಹೋರಾಟಗಾರರಾಗಿದ್ದ ಎಂ. ದೇವದಾಸ್ ಸಾಮಾಜಿಕ ಸಾಮರಸ್ಯದ ಧ್ವನಿಯಾಗಿದ್ದರು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಿಸಿದ್ದಾರೆ.

ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾಗಿದ್ದ ದಿ. ಎಂ. ದೇವದಾಸ್ ಅವರ ಸ್ಮರಣಾರ್ಥ ಉರ್ವಾಸ್ಟೋರ್ನ ಅಂಬೇಡ್ಕರ್ ಭವನದಲ್ಲಿ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ರಾಜ್ಯದ ಇತರ ಕೆಲ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಮತ್ತು ಉಡುಪಿಯಲ್ಲಿ ಪರಿಶಿಷ್ಟ ಸಮುದಾಯದವರ ಸಂಖ್ಯಾಬಲ ಕಡಿಮೆ. ಆದರೆ ಅವರ ಸಾಮಾಜಿಕ ಪರಿಸ್ಥಿತಿ ಮಾತ್ರ ಭಿನ್ನವಾಗಿಲ್ಲ. ದೇವದಾಸ್ ಅಂತಹ ದುರ್ಬಲ ಸಮುದಾಯಕ್ಕೆ ಧ್ವನಿಯಾಗಿದ್ದು ಹೋರಾಟ ನಡೆಸಿರುವುದನ್ನು ನಾನು ಕಂಡಿದ್ದೇನೆ. ಅವರ ಸರಳತೆ, ಸಜ್ಜನಿಕೆಯಿಂದಾಗಿ ನಾನೂ ಅವರ ಆತ್ಮೀಯನಾಗಿದ್ದೆ ಎಂದವರು ದೇವದಾಸ್ ಜೊತೆಗಿನ ತಮ್ಮ ಬಾಂಧವ್ಯವನ್ನು ನೆನಪಿಸಿಕೊಂಡರು. 

ಕರಾವಳಿ ಜಿಲ್ಲೆಗಳು ಮತೀಯವಾದಿಗಳ ಪ್ರಯೋಗಶಾಲೆಯಾಗಿ ಇಲ್ಲಿ ಸಾಮರಸ್ಯ ಕದಡುತ್ತಿದ್ದ ಸಂದರ್ಭ ಸಮಾನ ಮನಸ್ಕರ ಹೋರಾಟದಲ್ಲಿ ದೇವದಾಸ್ ಮುಂಚೂಣಿಯಲ್ಲಿರುತ್ತಿದ್ದರು. ಮತೀಯ ಕಲಹಗಳಿಂದ ಸಮಾಜದಲ್ಲಿ ತಿಳಿಯಾದ ವಾತಾವರಣ ಸೃಷ್ಟಿಸುವಲ್ಲಿ ಅವರ ಕೊಡುಗೆಯೂ ಇದೆ ಎಂದವರು ಹೇಳಿದರು. 

ದಸಂಸ ಸ್ಥಾಪಕ ಸದಸ್ಯ ಶ್ರೀಧರ್ ಕಲಿವೀರ್ ಮಾತನಾಡಿ, ದೇವದಾಸ್ ನಮ್ಮನ್ನು ಅಗಲಿದ್ದರೂ, ಅವರ ಹೋರಾಟ ಜೀವಂತವಾಗಿದೆ. ಅವರ ಹೋರಾಟದ ಧ್ವನಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತಿಧ್ವನಿಸುತ್ತಿದೆ ಎಂದರು. 

ಸಮಾಜದಲ್ಲಿ ಅಂಬೇಡ್ಕರ್ ಚಳವಳಿ ಬಲಪಡಿಸಬೇಕಾದರೆ ಅಹಂ, ಪ್ರತಿಷ್ಠೆಯಿಂದ ದೂರವಿರಬೇಕು. ಅಂತಹ ಸರಳತೆಯನ್ನು ದೇವದಾಸ್ ಮೈಗೂಡಿಸಿಕೊಂಡಿದ್ದರು ಎಂದವರು ಹೇಳಿದರು. 

ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕ ಎಂ. ಸೋಮಶೇಖರ ವಹಿಸಿದ್ದು, ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಅಧ್ಯಕ್ಷ ವೆಂಕಟಗಿರಿಯಯ್ಯ, ಅಖಿಲ ಭಾರತ ವಿಚಾರವಾದಿಗಳ ವೇದಿಕೆಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್, ಸಮುದಾಯ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ವಾಸುದೇವ ಉಚ್ಚಿಲ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ದಲಿತ ಮುಖಂಡರಾದ ನಾರಯಾಣ ಸ್ವಾಮಿ, ಹೆಗ್ಗೆರೆ ರಂಗಪ್ಪ, ಬಸವರಾಜು, ಮೂರ್ತಿ ಕಂಚಿನಕೋಟೆ, ಸರೋಜಿನಿ ಬಂಟ್ವಾಳ, ಸದಾಶಿವ ಪಡುಬಿದ್ರೆ, ಬಾಲು ಕುಂದರ್, ರಾಜಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 

ಬಿ.ಆರ್. ಅಂಬೇಡ್ಕರ್ ಹಾಗೂ ಎಂ.ದೇವದಾಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ಜಿಲ್ಲಾ ಸಂಘಟನಾ ಸಂಚಾಲಕರಾದ ರಘು ಕೆ. ಎಕ್ಕಾರು ಸ್ವಾಗತಿಸಿದರು. ಕೃಷ್ಣಾನಂದ ಡಿ. ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article