ಅಂತರ್ಜಲ ಸಂರಕ್ಷಣೆ: ಜಿಲ್ಲಾ ಮಟ್ಟದ ಕಲಾ ಚಿತ್ರ ಸ್ಪರ್ಧೆ
ಸಂತ ಅಲೋಶಿಯಸ್ ಪ್ರೌಢಶಾಲೆ ಪ್ರಾಂಶುಪಾಲ ಫಾ. ಜಾನ್ಸನ್ ಪಿಂಟೋ ಉದ್ಘಾಟಿಸಿ, ಮಾತನಾಡಿ, ನಮ್ಮ ಪರಿಸರದಲ್ಲಿ ಆಗುತ್ತಿರುವಂತಹ ಅತಿವೃಷ್ಟಿ ಅನಾವೃಷ್ಟಿ ಮತ್ತು ಅಂತರ್ಜಲದ ಕುಸಿತಕ್ಕೆ ನಮ್ಮ ಕೆಲವು ಕೃತ್ಯಗಳೇ ಕಾರಣವಾಗಿದೆ. ಆದ್ದರಿಂದ ಅದನ್ನು ಸರಿಪಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಅಂತರ್ಜಲ ಕಛೇರಿ ಹಿರಿಯ ಭೂ ವಿಜ್ಞಾನಿ ಶೇಕ್ ದಾವೂದ್ ಮಾತನಾಡಿ, ನಮ್ಮ ನೆಲ ಜಲವನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ಉಳಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಚಿತ್ರಕಲೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು ಎಂದು ಹೇಳಿದರು.
ಶಿಕ್ಷಣಾಧಿಕಾರಿ ಮನೋರಮ ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ಮಹತ್ವ ಹಿಂದಿನಿಂದಲೂ ನಮ್ಮ ಪೂರ್ವಜರು ಅರಿತಿರುವುದರಿಂದಲೇ ನದಿಗಳನ್ನು ದೇವತೆಗಳೆಂದು ಪರಿಗಣಿಸಿ, ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಕಲ್ಪಿಸುವಾಗ ಗಂಗೆ, ಯಮುನೆ ಇತ್ಯಾದಿ ನದಿಗಳ ಸ್ಮರಣೆ ಮಾಡುವ ಕ್ರಮ ಬೆಳೆದು ಬಂದಿದೆ. ನೀರಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ಆಹಾರ, ಆಮ್ಲಜನಕ ನೀರಿನಿಂದಲೇ ಸಾಧ್ಯವಾಗಿದೆ. ಅಂತಹ ಅಮೂಲ್ಯ ಸಂಪತ್ತನ್ನು ಉಳಿಸಲು ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ಯಶಸ್ವಿಯಾಗಲಿ, ಉತ್ತಮ ಜಾಗೃತಿ ಮೂಡುವ ಕಲಾಕೃತಿ ಚಿತ್ರ ರೂಪದಲ್ಲಿ ಮೂಡಿಬರಲಿ ಎಂದು ಹಾರೈಸಿದರು.
ವಿಷಯ ಪರಿವೀಕ್ಷಕ ಲಕ್ಷ್ಮೀನಾರಾಯಣ ಅವರು ಪ್ರಸ್ತಾವನೆಯಲ್ಲಿ ʼಎಲ್ ನೀನೋʼ ಪರಿಣಾಮದಿಂದ ಹವಾಮಾನದಲ್ಲಿ ಆಗುತ್ತಿರುವ ತೀವ್ರತರವಾದಂತ ಬದಲಾವಣೆ, ಅಂತರ್ಜಲದ ಕುಸಿತ ಹಾಗೂ ಇದರಿಂದ ಮುಂದಿನ ಜನಾಂಗಕ್ಕೆ ಆಗಬಹುದಾದ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಅಲೋಶಿಯಸ್ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಲ್ಯಾನ್ಸಿ ಡಿಸೋಜ ಮತ್ತು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ನೋಡಲ್ ಅಧಿಕಾರಿ ದೇವದಾಸ್ ಕೆ. ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಸಂಸ್ಥೆಯ ಚಿತ್ರಕಲಾ ಶಿಕ್ಷಕ ಜಾನ್ ಚಂದ್ರನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಣ ಸಂಯೋಜಕಿ ಅನಿತಾ ವಂದಿಸಿದರು.
ಜಿಲ್ಲೆಯ 7 ವಲಯಗಳಿಂದ ವಿಜೇತರಾದ 21 ವಿದ್ಯಾರ್ಥಿಗಳಿಗೆ ಕಲಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ವಿವಿಧ ವಲಯಗಳ ಚಿತ್ರಕಲಾ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ಬಂಟ್ವಾಳ, ಶ್ರೀ ಹರೀಶ್ ಕುಮಾರ್ ಮಂಗಳೂರು ದಕ್ಷಿಣ, ಹಾಗೂ ಪ್ರಸನ್ನ ಕುಮಾರ್ ಮಂಗಳೂರು ಉತ್ತರ ವಲಯ ತೀರ್ಪುಗಾರರಾಗಿ ಸಹಕರಿಸಿದರು. ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 20 ಶಿಕ್ಷಕರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಮಟ್ಟದ ಕಲಾಚಿತ್ರ ಸ್ಪರ್ಧೆಯ ಫಲಿತಾಂಶ:
ಪ್ರಥಮ ಸ್ಥಾನ : ಲಿಖಿತಾ ಕೆ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ, ತೆಂಕಿಲ ಪುತ್ತೂರು.
ದ್ವಿತೀಯ ಸ್ಥಾನ : ಆದ್ಯಾ ಪಿ. ಬಿ., ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕುಕ್ಕಾಜೆ. ಬಂಟ್ವಾಳ.
ತೃತೀಯ ಸ್ಥಾನ : ಅಜಿತ್ ಎಸ್ ಕಾಮತ್, ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಕಿಲ್ಪಾಡಿ. ಮಂಗಳೂರು ಉತ್ತರ.