ಪಿಲಿಕುಳ ಪ್ರವಾಸಿ ತಾಣಕ್ಕೆ ಜೀವಕಳೆ ತುಂಬುವಲ್ಲಿ ಸರ್ಕಾರ ವಿಫಲ: ಡಾ. ಮೋಹನ್ ಆಳ್ವ
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇವರ ಸಹಯೋಗದೊಂದಿಗೆ ಭಾನುವಾರ ಪಿಲಿಕುಳ ಗುತ್ತು ಮನೆಯಲ್ಲಿ ನಡೆದ ಆಟಿ ಕೂಟ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಗುತ್ತಿನ ಮನೆ ವರ್ಷಕ್ಕೊಮ್ಮೆ ಬಾಗಿಲು ತೆರೆದರೆ ಸಾಲದು. ಜಿಲ್ಲೆಯ ವಿಶೇಷ ಆಚರಣೆಗಳು ಇಲ್ಲಿ ನಡೆಯಬೇಕಾಗಿದೆ. ನಿಶ್ಚಿತಾರ್ಥ, ಸೀಮಂತ, ಹುಟ್ಟು ಹಬ್ಬ ಮೊದಲಾದ ಕಾರ್ಯಕ್ರಮಗಳಿಗೆ ಇಲ್ಲಿ ಅವಕಾಶ ಕಲ್ಪಿಸಬೇಕಾಗಿದೆ. ಆಗ ಜನ ಬಂದು ಇಲ್ಲಿನ ಸೌಂದರ್ಯ ಸವಿಯಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.
ಶಾಸಕ ಉಮಾನಾಥ ಎ.ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಲ ಬದಲಾಗಿಲ್ಲ. ನಾವು ಪರಿವರ್ತನೆಯಾಗಿದ್ದೇವೆ. ಹಿಂದಿನ ಕಾಲದ ಆಟಿ ತಿನಿಸುಗಳನ್ನು ಮರೆಯಬಾರದು ಎನ್ನುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ ಎಂದರು.
ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ, ಮಾಜಿ ಶಾಸಕ ಜೆ.ಆರ್.ಲೋಬೊ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ, ಮೂಡುಶೆಡ್ಡೆ ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವರಾಮ ಮಲ್ಲಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಉಪ ಸಮಿತಿ ಅಧ್ಯಕ್ಷ ಡಾ.ಶ್ರೀನಿಕೇತನ, ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬ್ಯಾಂಕ್ ಆಫ್ ಬರೋಡಾದ ರೀಜನಲ್ ಮ್ಯಾನೇಜರ್ ಪಂಕಜ್ ಕುಮಾರ್ ಸುಮನ್ ಮೊದಲಾದವರಿದ್ದರು.
ನಿವೃತ್ತ ಶಿಕ್ಷಕ ಸುಧಾಕರ ರಾವ್ ಪೇಜಾವರ ಆಟಿ ತಿಂಗಳ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ (ಪ್ರಭಾರ) ಡಾ.ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಂಸ್ಕೃತಿ ಗ್ರಾಮದ ಮುಖ್ಯಸ್ಥ ಡಾ.ನಿತಿನ್ ಬಾಳೆಪುಣಿ ವಂದಿಸಿದರು. ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಸಾಲಿಗ್ರಾಮದ ಶ್ರೀ ಗುರು ಮಾರುತಿ ಹೌಂದೇರಾಯನ ಓಲಗ ಕಲಾ ತಂಡದವರು ‘ಹೌಂದೇರಾಯನ ಓಲಗ’ ಜಾನಪದ ನೃತ್ಯ ರೂಪಕ ಪ್ರಸ್ತುತ ಪಡಿಸಿದರು.
ಸಾಂಪ್ರದಾಯಿಕ ತಿನಿಸುಗಳು..
ಆಟಿಕೂಟದಲ್ಲಿ 32 ಬಗೆಯ ಸಾಂಪ್ರದಾಯಿಕ ಸಸ್ಯ ಪದಾರ್ಥಗಳನ್ನು ಉಣ ಬಡಿಸಲಾಯಿತು. ಈರುಳ್ಳಿ ಸೊಪ್ಪು ಕೋಸಂಬರಿ, ಗುಳ್ಳೆ ಬದನೆ ಚಟ್ನಿ, ಕೆಸುವಿನ ಚಟ್ನಿ, ಕಣಿಲೆ ಪಲ್ಯ, ಬಾಳೆ ದಿಂಡು ಪಲ್ಯ, ಪತ್ರೊಡೆ, ಮೆಂತೆ ಸೊಪ್ಪು ಚಿತ್ರಾನ್ನ, ಬಿಲ್ವಪತ್ರೆ ತಂಬುಳಿ, ಅರಸಿನ ಕೊಂಬಿನ ತಂಬುಳಿ, ಹಲಸಿನ ಬೀಜದ ಸಾರು, ಅರಸಿನ ಎಲೆ ಪಾಯಸ, ನುಗ್ಗೆ ಸೊಪ್ಪು ಪಕೋಡ, ಹಾಲು ಬಾಯಿ ವಿಶೇಷವಾಗಿತ್ತು.