ದ.ಕ. ಬಹುತೇಕ ಸಮಯ ಬಿಸಿಲಿನಿಂದ ಆವೃತ್ತ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ಬಹುತೇಕ ಸಮಯ ಬಿಸಿಲಿನಿಂದ ಆವೃತ್ತವಾಗಿದ್ದು, ದಿನವಿಡೀ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗಿದೆ. ಬೆಳಗಿನ ಜಾವದಿಂದಲೇ ಮೋಡ ಬಿಸಿಲಿನಿಂದ ಆರಂಭವಾದ ಅಲ್ಪ ಮಳೆ ಸಂಜೆಯ ವೇಳೆಗೆ ಗ್ರಾಮೀಣ ಭಾಗಗಳಲ್ಲಿ ಬಿರುಸು ಪಡೆದುಕೊಂಡಿತು. ಬಹುತೇಕ ಸಮಯ ಸೂರ್ಯನ ಪ್ರಖರ ದರ್ಶನದಿಂದ ವಾತಾವರಣ ಕೆಲವೊಮ್ಮೆ ಬಿಸಿಯೇರುತ್ತಿತ್ತು. ಮುಂಬರುವ ದಿನಗಳಲ್ಲಿ ಮಳೆಯ ತೀವ್ರತೆ ಕೊಂಚ ತಗ್ಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರ ಧರ್ಮಸ್ಥಳ, ಚಾರ್ಮಾಡಿ ಘಾಟಿ ಪ್ರದೇಶ, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ಸೇರಿದಂತೆ ಪಶ್ಚಿಮ ಘಟ್ಟದ ತಳಭಾಗದ ಪ್ರದೇಶಗಳಲ್ಲಿ ಅಲ್ಪ ಮಳೆಯಾಗಿದೆ, ಮಂಗಳೂರು ನಗರ ಸುತ್ತಮುತ್ತ ಬಿಸಿಲು ತುಸು ಜಾಸ್ತಿಯಿದ್ದು, ಸಾಧಾರಣ ಮಳೆಯಾಗಿದೆ. ಸೋಮವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 13 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಬೆಳ್ತಂಗಡಿ ಹಾಗೂ ಮೂಲ್ಕಿಯಲ್ಲಿ 14ಮಿಮಿ ಮಿ.ಮೀ ಮಳೆಯಾಗಿದೆ.
ಮಂಗಳವಾರ ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ದಿನದಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದೆರಡು ಮಳೆ ಹೆಚ್ಚಿರಬಹುದು. ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೂ ಇದೇ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ಮಾರುತಗಳು ನಿರಂತರವಾಗಿ ಫೆಸಿಫಿಕ್ ಸಾಗರದ ಕಡೆಗೆ ಚಲಿಸುತ್ತಿರುವುದರಿಂದ ಬಾಂಗ್ಲಾದೇಶದ ತಿರುವಿಕೆಯು ಅಷ್ಟೇನು ಪರಿಣಾಮ ಬೀರುವ ಸಾಧ್ಯತೆಗಳು ಕಾಣುತ್ತಿಲ್ಲ. ಆದರೆ ಇದರ ಪ್ರಭಾವದಿಂದ ಮಧ್ಯಪ್ರದೇಶ, ಒಡಿಶಾ, ಜಾಖರ್ಂಡ್ ರಾಜ್ಯಗಳಲ್ಲಿ ಹೆಚ್ಚು ಮಳೆಯಾಗುವ ಲಕ್ಷಣಗಳಿದ್ದು, ಕರಾವಳಿಯಲ್ಲಿ ಮಳೆಯ ಪ್ರಮಾಣ ಕ್ಷೀಣಗೊಳ್ಳಲಿದೆ.