ದಕ್ಷಿಣ ಕನ್ನಡದಲ್ಲಿ ಬಿಟ್ಟುಬಿಟ್ಟು ಸುರಿದ ಗಾಳಿ ಸಹಿತ ಮಳೆ: ಕರಾವಳಿಯಲ್ಲಿ ಮುಂಗಾರು ತಗ್ಗುವ ಮುನ್ಸೂಚನೆ!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ದಿನವಿಡೀ ಬಿಟ್ಟುಬಿಟ್ಟು ಗಾಳಿ ಸಹಿತ ಸಾಧಾರಣ ಮಳೆಯಾಗಿದೆ. ಬೆಳಗಿನ ಜಾವದಿಂದಲೇ ಮೋಡ ಬಿಸಿಲಿನಿಂದ ಆರಂಭವಾದ ಅಲ್ಪ ಮಳೆ ಸಂಜೆಯ ವೇಳೆಗೆ ಗ್ರಾಮೀಣ ಭಾಗಗಳಲ್ಲಿ ಬಿರುಸು ಪಡೆದುಕೊಂಡಿತು. ಬಹುತೇಕ ಸಮಯ ಸೂರ್ಯನ ಪ್ರಖರ ದರ್ಶನದಿಂದ ವಾತಾವರಣ ಕೆಲವೊಮ್ಮೆ ಬಿಸಿಯೇರುತ್ತಿದ್ದು, ಮುಂಬರುವ ದಿನಗಳಲ್ಲಿ ಮಳೆಯ ತೀವ್ರತೆ ಕೊಂಚ ತಗ್ಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಧರ್ಮಸ್ಥಳ, ಚಾರ್ಮಾಡಿ ಘಾಟಿ ಪ್ರದೇಶ, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ಸೇರಿದಂತೆ ಪಶ್ಚಿಮ ಘಟ್ಟದ ತಳಭಾಗದ ಪ್ರದೇಶಗಳಲ್ಲಿ ಮಳೆಯ ಆರ್ಭಟ ಕೊಂಚ ಹೆಚ್ಚೇ ಇತ್ತು. ಇತ್ತ ಮಂಗಳೂರು ನಗರ, ಕೋಣಾಜೆ, ಮೂಲ್ಕಿ, ಪಣಂಬೂರು ಹಾಗೂ ಉಳ್ಳಾಲದಲ್ಲೂ ದಿನದಲ್ಲಿ ಅಲ್ಪಪ್ರಮಾಣದಲ್ಲಿ ಬಿರುಸಿನ ಮಳೆ ಇತ್ತು. ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಕರಾವಳಿ ತೀರ ಪ್ರದೇಶದ ಜನರಿಗೆ ಜಾಗರೂಕರಾಗಿರಲು ಸೂಚನೆ ನೀಡಲಾಗಿದೆ.
ಶನಿವಾರ ರಾತ್ರಿ ಮಧ್ಯಮ ಸ್ತರದ ಭಾರಿ ಮೋಡಗಳು ಪಶ್ಚಿಮ ಘಟ್ಟದ ಸಾಲುಗಳಲ್ಲಿ ತಡೆಯಲ್ಪಟ್ಟಿದ್ದರಿಂದ ಚಾರ್ಮಾಡಿ, ಆಗುಂಬೆ ಸೇರಿದಂತೆ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮುನ್ಸೂಚನೆಗೂ ಮೀರಿ ಅತಿ ಭಾರಿ ಮಳೆಯಾಗಿದೆ. ಆದರೆ ಭಾನುವಾರ ಬೆಳಗ್ಗಿನಿಂದ ಮಳೆ ತುಸು ಕಡಿಮೆಯಾಗಿದ್ದು, ದಿನಪೂರ್ತಿ ಬಿಸಿಲು ಸಹಿತ ಮೋಡ ಮುಸುಕಿದ ವಾತಾವರಣವೇ ಮುಂದುವರಿದಿತ್ತು. ಭಾನುವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 21 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಸುಳ್ಯದಲ್ಲಿ 87ಮಿಮಿ ಮಿ.ಮೀ ಮಳೆಯಾಗಿದೆ. ಗಾಳಿಯ ಚಲನೆಯು ವಾಯವ್ಯದಿಂದ ಆಗ್ನೇಯಕ್ಕೆ ಇರುವುದರಿಂದ ಪಚ್ಚಿಮಘಟ್ದ ಕೆಳಗಿನ ಪ್ರದೇಶಗಳಲ್ಲಿ ಮಳೆ ಹೆಚ್ಚಿರಬಹುದು ಎಂದು ಹವಾಮಾಣ ಇಲಾಖೆ ಸೂಚನೆ ನೀಡಿದೆ.
ಸಾಮಾನ್ಯ ಬಿಸಿಲು ಮಳೆಯ ಮುನ್ಸೂಚನೆ:
ಕಾಸರಗೋಡು ಜಿಲ್ಲೆಯಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣದ ಇದ್ದು, ಸಂಜೆ ಹಾಗೂ ರಾತ್ರಿ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಇರಲಿದ್ದು, ಘಟ್ಟದ ಕೆಳಗಿನ ಪ್ರದೇಶಗಳ ಸುತ್ತಮುತ್ತ 2, 3 ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಮಧ್ಯಾಹ್ನ ನಂತರ, ರಾತ್ರಿ ಒಂದೆರಡು ಸಾಮಾನ್ಯ ಬಿಸಿಲು ಮಳೆಯ ಮುನ್ಸೂಚನೆ ಇದೆ. ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆ ಕ್ಷೀಣಿಸಿದ್ದು, ಅಲ್ಲಲ್ಲಿ ಒಂದೆರಡು ಸಣ್ಣ ಅವಧಿಯ ಸಮಾನ್ಯ ಮಳೆಯ ಸಾಧ್ಯತೆಗಳಿವೆ. ಆ.17 ಅಥವಾ 18ರಿಂದ ಬಿಸಿಲು ಹಾಗೂ ಮೋಡದ ವಾತಾವರಣ ಇರಬಹುದು.
ಚಂಡಮಾರುತ ಶಿಥಿಲ:
ಜಪಾನ್ ತೀರದ ಮಹಾ ಚಂಡಮಾರುತವು ಶಿಥಿಲಗೊಂಡ ನಂತರವೂ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ಕಡೆಯಿಂದ ಈಗ ಬೀಸುತ್ತಿರುವ ಗಾಳಿಯ ಚಲನೆ ಯಥಾವತ್ತಾಗಿ ಮುಂದುವರಿಯುವಂತೆ ತೋರುತ್ತಿದ್ದು, ಮುಂಗಾರು ಪ್ರಭಲಗೊಳ್ಳುವ ಲಕ್ಷಣಗಳು ತಡವಾಗಬಹುದು ಅಥವಾ ಹೀಗೆ ಮುಂದುವರಿಯುವ ಸಾಧ್ಯತೆಯೂ ಇದೆ.