ವಿಮಾನ ನಿಲ್ದಾಣ ಪ್ರಾಧಿಕಾರದ ವಿರುದ್ಧ ಟ್ಯಾಕ್ಷಿ ಚಾಲಕ, ಮಾಲಕರ ಪ್ರತಿಭಟನೆ
ದ. ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷ ಆನಂದ್ ಕೆ., ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಹೋರಾಟ ನಿಲ್ಲಿಸುವುದಿಲ್ಲ, ಪ್ರವಾಸಿ ವಾಹನಗಳು ಮತ್ತು ಖಾಸಗಿ ವಾಹನಗಳ ನಡುವೆ ತಾರತಮ್ಯ ನಡೆಸುತ್ತಿರುವುದು ಬಹಳ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಸರಕಾರದ ಎಲ್ಲಾ ತೆರಿಗೆಗಳನ್ನು ಪಾವತಿಸಿ ಮೋಟಾರು ವಾಹನ ಕಾಯಿದೆಯ ಎಲ್ಲಾ ನಿಯಮಗಳನ್ನು ಪಾಲಿಸಿ, ನ್ಯಾಯಯುತವಾಗಿ ದುಡಿಯುವ ಚಾಲಕ ಮಿತ್ರರಿಗೆ ಅವೈಜ್ಞಾನಿಕ ಪಾರ್ಕಿಂಗ್ ದರವನ್ನು ವಿಧಿಸಿ ಪ್ರವಾಸಿ ವಾಹನಗಳಿಗೆ ವಿಶೇಷ ಸವಲತ್ತು ನೀಡುತ್ತಿರುವುದು ಅಕ್ಷಮ್ಯ ಅಪರಾಧ. ಕಳೆದ 57 ವರ್ಷಗಳಿಂದ ಪ್ರವಾಸಿ ವಾಹನ ಚಾಲಕ ಮಾಲಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಉಭಯ ಜಿಲ್ಲೆಗಳ ಸಂಘ ಇದನ್ನು ಎಂದಿಗೂ ಸಹಿಸುವುದಿಲ್ಲ ಎಂದರು.
ಈ ಪ್ರತಿಭಟನೆಗೆ ಯಾವುದೇ ರೀತಿಯ ಸ್ಪಂದನೆಗಳು ಸಿಗದಿದ್ದರೆ ತಕ್ಷಣ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಿದ್ದೇವೆ ಎಂದು ಎಚ್ಚರಿಸಿದರು.
ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಈ ರೀತಿಯ ತಾರತಮ್ಯ ಹಾಗೂ ದಬ್ಬಾಳಿಕೆ ದೇಶದ ಯಾವುದೇ ವಿಮಾನ ನಿಲ್ದಾಣಗಳಲ್ಲಿ ಇರುವುದಿಲ್ಲ. ಸಾಂಪ್ರದಾಯಿಕ ವಾಹನ ಪ್ರವಾಸಿ ವಾಹನಗಳು ಪ್ರಯಾಣಿಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವ ಮೂಲಕ ಉಭಯ ಜಿಲ್ಲೆಗಳಲ್ಲಿ ಎಲ್ಲಾ ಸವಾಲುಗಳನ್ನು ಸ್ಪಷ್ಟವಾಗಿ ಎದುರಿಸಿ ಮುನ್ನಡೆಯುತ್ತಿದ್ದೇವೆ. ಅದೆಷ್ಟೋ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಸ್ವಉದ್ಯೋಗ ನೀಡಿದ ಹೆಮ್ಮೆ ನಮ್ಮ ಪ್ರವಾಸಿ ವಾಹನಗಳದ್ದು ಎಂದು ಬೇಸರ ವ್ಯಕ್ತಪಡಿಸಿದರು. ಸಂಘದ ಹಿರಿಯ ಸದಸ್ಯ ಪ್ರಮೋದ್ ಕುಮಾರ್ ಉಳ್ಳಾಲ್ ಮಾತನಾಡಿದರು.
ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಉಪ ತಾಲೂಕು ದಂಡಾಧಿಕಾರಿ ನವೀನ್ ಕುಮಾರ್ ರವರು ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿ ಅತಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಸ್ಥಳೀಯ ಉನ್ನತ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆಯನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಪ್ರವಾಸಿ ವಾಹನದ ಚಾಲಕರಿಗೆ ಅನುಕೂಲವಾಗುವಂತೆ ಶೀಘ್ರವಾಗಿ ಕ್ರಮ ವಹಿಸುವ ಭರವಸೆ ನೀಡಿದರು. ಸಂತೋಷ್ ಕೊಲ್ಯ ಕಾರ್ಯಕ್ರಮ ನಿರೂಪಿಸಿದರು.