ತಾಲೂಕು ಕೇಂದ್ರದಲ್ಲಿ ‘ಮೆಡಿಕಲ್ ಕಾಲೇಜು’ ದೊಡ್ಡ ಪರಿವರ್ತನೆ: ಕಾವು ಹೇಮನಾಥ ಶೆಟ್ಟಿ
ಅವರು ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಮೆಡಿಕಲ್ ಕಾಲೇಜು ನಿರ್ಮಾಣದ ಹಿಂದೆ ಶಾಸಕ ಅಶೋಕ್ ಕುಮಾರ್ ಅವರ ದೂರದೃಷ್ಟಿ ಮತ್ತು ಬದ್ದತೆಯ ಪ್ರಯತ್ನವಿದೆ. ಇದರಿಂದ ದ.ಕ., ಕೊಡಗು ಜಿಲ್ಲೆಗಳ ಜನತೆಗೆ ಉತ್ತಮ ಆರೋಗ್ಯ ಸೇವೆ ಸಿಗಲಿದೆ. ಪುತ್ತೂರು ಆಸುಪಾಸಿನ ಸುಮಾರು 15 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿಯ ಮೌಲ್ಯ ಹೆಚ್ಚಾಗಿ ಹೋಟೆಲ್, ವಸತಿ, ಔಷಧ ಮಳಿಗೆಗಳು, ವೈದ್ಯಕೀಯ ಪ್ರಯೋಗಾಲಯಗಳು, ಸಾರಿಗೆ, ಇತರ ವ್ಯಾಪಾರ ಉದ್ಯಮಗಳಿಗೆ ಸಾಕಷ್ಟು ಅನುಕೂಲವಾಗಲಿದೆ.
ಕಾಲೇಜಿನ ಕಾರಣದಿಂದ ಪುತ್ತೂರಿನ ಮೂಲಸೌಕರ್ಯವೂ ಅಭಿವೃದ್ಧಿ ಹೊಂದಲಿದ್ದು, ರಸ್ತೆ, ಕುಡಿಯುವ ನೀರು, ಸಾರಿಗೆ ಇತರ ಮೂಲಸೌಕರ್ಯ ಕೂಡ ಗುಣಮಟ್ಟದಿಂದ ಕೂಡಿರಲಿದ್ದು, ಆರೋಗ್ಯಕ್ಕೆ ಸಂಬಂಧಿಸಿ ಇತರ ಶಿಕ್ಷಣ ಸಂಸ್ಥೆಗಳು ಕೂಡ ಪುತ್ತೂರಿಗೆ ಆಗಮಿಸಲಿದೆ. ಇದರಿಂದ ಪುತ್ತೂರು ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲೇ ಪ್ರಮುಖ ನಗರವಾಗಿ ಬೆಳೆಯಲಿದೆ. ಹೀಗಾಗಿ ರಾಜ್ಯ ಸರ್ಕಾರ ವೈದ್ಯಕೀಯ ಕಾಲೇಜಿಗೆ ಅಧಿಕೃತ ಅನುಮೋದನೆ ನೀಡಿ ಶೀಘ್ರ ಕಾಮಗಾರಿ ಆರಂಭಿಸುವಂತೆ ನಾವು ಒತ್ತಾಯಿಸುತ್ತಿದ್ದೇವೆ.
ಪುತ್ತೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಬರುವ ಮೆಡಿಕಲ್ ಕಾಲೇಜು ಕುರಿತು ಅನಗತ್ಯ ಟೀಕೆಗಳನ್ನು ಮಾಡುವುದು ಸರಿಯಲ್ಲ, ಯಾರೇ ಆದರೂ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಅದನ್ನು ಬೆಂಬಲಿಸುವ ಕಾರ್ಯ ಮಾಡಬೇಕು. ಪುತ್ತೂರು-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಯ ಕುರಿತು ಕೂಡ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದು, ರಸ್ತೆ ಅಭಿವೃದ್ಧಿಯಾದರೆ ಎಲ್ಲರಿಗೂ ಒಳ್ಳೆಯದು ಎಂದರು.
ಸುದ್ಧಿಗೋಷ್ಟಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರವಿಪ್ರಸಾದ್ ಶೆಟ್ಟಿ, ಗಂಗಾಧರ್, ಪುಡಾ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಕಾಸಿಂ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಮುಖ ಸುಪ್ರೀತ್ ಕಣ್ಣಾರಾಯ ಉಪಸ್ಥಿತರಿದ್ದರು.