ಸಂಡೆ ಬಜಾರ್ ತೆರವು ಕಾರ್ಯಾಚಾರಣೆ ಅಮಾನುಷ: ಬಿ.ಕೆ. ಇಮ್ತಿಯಾಜ್
ಮಂಗಳೂರು: ನಗರ ಪಾಲಿಕೆ ಆಯುಕ್ತರ ಮೌಖಿಕ ಆದೇಶದಂತೆ ಇಂದು ಪುರಭವನದ ಬಳಿ ಸಂಡೆ ಬಜಾರ್ ವ್ಯಾಪಾರಿಗಳು ಬೆಳಗ್ಗೆಯಿಂದಲೇ ವ್ಯಾಪಾರ ಆರಂಭಿಸಿದ್ದರು ಸಂಜೆ 4ರ ವೇಳೆಗೆ ಪಾಲಿಕೆಯ ವಲಯ ಆಯುಕ್ತೆಯ ನೇತೃತ್ವದಲ್ಲಿ ಪಾಲಿಕೆ ತೆರವು ಕಾರ್ಯಾಚಾರಣೆ ನಡೆಸಿರುವುದು ಅತ್ಯಂತ ಅಮಾನವೀಯ ಕ್ರಮವಾಗಿದೆ ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ (ಸಿಐಟಿಯು) ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಖಂಡಿಸಿದ್ದಾರೆ.
ಕಳೆದ ಎರಡು ಭಾನುವಾರಗಳು ಆಯುಕ್ತರ ಕೋರಿಕೆಯಂತೆ ವ್ಯಾಪಾರಿಗಳ ಗುರುತಿಸುವಿಕೆ ಮತ್ತು ವ್ಯಾಪಾರಿಗಳು ಕರ್ನಾಟಕ ರಾಜ್ಯದವರಾಗಿದ್ದಾರಾ ಎಂಬುದನ್ನು ಖಚಿತಪಡಿಸಲು ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪಾಲಿಕೆ ಆಯುಕ್ತರು ಮೌಖಿಕ ಆದೇಶ ನೀಡಿದ್ದರು ಅದರಂತೆ ಇಂದು ಸಂಡೆ ಬಜಾರ್ ವ್ಯಾಪಾರಿಗಳು ತರಕಾರಿ ಸಹಿತ ಮಾರಾಟಕ್ಕೆ ಸರಕುಗಳನ್ನು ತಂದು ವ್ಯಾಪಾರ ಆರಂಭಿಸಿದ್ದರು ಮಧ್ಯಾಹ್ನ 4ಗಂಟೆಗೆ ಪಾಲಿಕೆ ಅಧಿಕಾರಿಗಳು ಯಾರದ್ದೋ ಕುಮ್ಮಕ್ಕಿನಿಂದ ಧಿಢೀರನೇ ಧಾಳಿ ನಡೆಸಿರುವುದು ವ್ಯಾಪಾರಿಗಳಿಗೆ ನಷ್ಟ ಮತ್ತು ಆಶ್ಚರ್ಯ ಉಂಟು ಮಾಡಿದೆ.
ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಹೆಚ್ಚು ವ್ಯಾಪರದ ನಿರೀಕ್ಷೆಯಲ್ಲಿ ಹೆಚ್ಚು ಸರಕುಗಳನ್ನು ತಂದಿದ್ದರು ಸಂಜೆ 4 ಗಂಟೆ ಆಗಿದೆ ಇನ್ನುಳಿದ ಮೂರು ಗಂಟೆಯ ವ್ಯಾಪಾರ ಮಾಡಲು ಅವಕಾಶ ಕೊಡಿ ಹಬ್ಬದ ಎಂದು ಕೇಳಿಕೊಂಡರೂ ಕಳೆದ ಎರಡು ತಿಂಗಳಿನಿಂದ ವ್ಯಾಪಾರ ಮಾಡದೆ ಕಂಗಾಲಾಗಿದ್ದೇವೆ ಈ ದಿನ ಪೂರ್ತಿ ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಅಲವತ್ತು ಕೊಂಡರೂ ಪಾಲಿಕೆ ಅಧಿಕಾರಿಗಳು ಅವಕಾಶ ನೀಡದೆ ನಿಷ್ಕರುಣಿಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವಾರದ ಸಂತೆ ನಡೆಸಲು ಬೀದಿಬದಿ ವ್ಯಾಪಾರದ ಕಾನೂನಿನಲ್ಲಿ ಅವಕಾಶ ಇದ್ದರೂ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಾರ್ಯಾಚರಣೆ ಮತ್ತೆ ಮುಂದುವರಿಸಿದಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಬಿ.ಕೆ. ಇಮ್ತಿಯಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.