ಆ.18: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ  ಬಿಎಂಎಸ್ ನಿಂದ ಪ್ರತಿಭಟನೆ

ಆ.18: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಂಎಸ್ ನಿಂದ ಪ್ರತಿಭಟನೆ


ಮೂಡುಬಿದಿರೆ: ಕಾರ್ಮಿಕರಿಗೆ ನ್ಯಾಯಯುತ ವೇತನ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆ, ಪಿಂಚಣಿ, ಆರೋಗ್ಯ ರಕ್ಷಣೆ ಹಾಗೂ ಸುರಕ್ಷಿತ ಕೆಲಸದ ವಾತಾವರಣ ಒದಗಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಸಹಿತ  ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜ್ದೂರು ಸಂಘ (ಬಿಎಂಎಸ್) ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು, ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಬಿಎಂಎಸ್ ವತಿಯಿಂದ ಆಗಸ್ಟ್ 18ರಂದು ಬೆ. 11.00 ಗಂಟೆಗೆ  ಮಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ  ಪ್ರತಿಭಟನೆ ನಡೆಯಲಿದೆ ಎಂದು ಬಿಎಂಎಸ್ ಕರ್ನಾಟಕದ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಭಗವಾನ್ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಇಎಸ್‌ಐಸಿ ವೇತನ ಮಿತಿಯನ್ನು ₹21,000ರಿಂದ ₹42,000ಕ್ಕೆ ಹಾಗೂ ಇಪಿಎಫ್ ವೇತನ ಮಿತಿಯನ್ನು ₹15,000ರಿಂದ ₹30,000ಕ್ಕೆ ಹೆಚ್ಚಿಸಬೇಕು. ಇಪಿಎಸ್-95 ಕನಿಷ್ಠ ಮಾಸಿಕ ಪಿಂಚಣಿಯನ್ನು ₹1,000ರಿಂದ ₹7,500ಕ್ಕೆ ಹೆಚ್ಚಿಸಿ, ಪಿಂಚಣಿದಾರರಿಗೆ ಡಿಎ ಹಾಗೂ ಸಮಗ್ರ ಆರೋಗ್ಯ ಸೌಲಭ್ಯ ಒದಗಿಸಬೇಕು.

ಬೋನಸ್ ಲೆಕ್ಕಾಚಾರ ಮತ್ತು ಅರ್ಹತಾ ವೇತನ ಮಿತಿಯನ್ನು ಹೆಚ್ಚಿಸುವುದು, ಆಶಾ ಮತ್ತು ಅಂಗನವಾಡಿ ಸೇರಿದಂತೆ ಯೋಜನಾ ನೌಕರರ ಗೌರವಧನ ಹಾಗೂ ಸಾಮಾಜಿಕ ಭದ್ರತೆ ಹೆಚ್ಚಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸುವುದು ಮತ್ತು ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗುವ ಅಂಶಗಳನ್ನು ಶ್ರಮ ಸಂಹಿತೆಯಿಂದ ತೆಗೆದುಹಾಕುವಂತೆ ಸಂಘ ಆಗ್ರಹಿಸಿದೆ.

ಬ್ಯಾಂಕ್ ನೌಕರರಿಗೆ ವಾರದಲ್ಲಿ ಐದು ದಿನಗಳ ಕೆಲಸ, ಗ್ರಾಚ್ಯುಟಿ ಗರಿಷ್ಠ ಮಿತಿಯನ್ನು ₹20 ಲಕ್ಷದಿಂದ ₹40 ಲಕ್ಷಕ್ಕೆ ಹೆಚ್ಚಿಸುವುದು ಹಾಗೂ ರಾಷ್ಟ್ರೀಯ ಕನಿಷ್ಠ ಮಾಸಿಕ ವೇತನವನ್ನು ₹30,000ಕ್ಕೆ ನಿಗದಿಪಡಿಸುವ ಬೇಡಿಕೆಗಳನ್ನೂ ಮುಂದಿಡಲಾಗಿದೆ ಎಂದು ಭಗವಾನ್ ದಾಸ್ ತಿಳಿಸಿದರು.

ದಕ್ಷಿಣ ಕನ್ನಡದ ಎಂಆರ್‌ಪಿಎಲ್, ಎನ್‌ಎಂಪಿಎ (ಎನ್‌ಎಂ‌ಪಿಟಿ), ಕೆಐಒಸಿಎಲ್-ಕುದುರೆಮುಖ ಸೇರಿದಂತೆ ಪ್ರಮುಖ ಕೈಗಾರಿಕಾ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಸ್ಥಳೀಯ ಅರ್ಹ ಯುವಕರು ಮತ್ತು ಕಾರ್ಮಿಕರಿಗೆ ಉದ್ಯೋಗಾವಕಾಶ ನೀಡಬೇಕು. ಗುತ್ತಿಗೆ ಕಾರ್ಮಿಕರಿಗೆ ನ್ಯಾಯಯುತ ವೇತನ, ಪಿಎಫ್, ಇಎಸ್‌ಐ, ಗ್ರಾಚ್ಯುಟಿ, ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ಖಚಿತಪಡಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಕುದುರೆಮುಖ ಮಜ್ದೂರು ಸಂಘ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಬಿ.ಸಿ., ಭಾರತೀಯ ಮಜ್ದೂರು ಸಂಘ ಮೂಡುಬಿದಿರೆ ತಾಲೂಕು ಅಧ್ಯಕ್ಷ ರಾಜೇಶ್ ಸುವರ್ಣ, ಉಪಾಧ್ಯಕ್ಷ ಪದ್ಮನಾಭ ಇರುವೈಲ್ , ಕೋಶಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ಮೂಡುಬಿದಿರೆ ಅಧ್ಯಕ್ಷ ದೀಪಕ್ ರಾಜ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article