ಬಂಟ್ವಾಳ ಗಾಣಿಗರ ಯುವ ವೇದಿಕೆಯಿಂದ ಕೆಸರುಗದ್ದೆ ಕ್ರೀಡಾಕೂಟ: ಮೂಡುಬಿದಿರೆ ಗಾಣಿಗ ಸಂಘಕ್ಕೆ ಹಲವು ಬಹುಮಾನ
ಬ್ಯಾಕ್ ರೇಸ್‌ನಲ್ಲಿ ನತೀಶ್ ಬಾರಾಡಿ ಪ್ರಥಮ ಹಾಗೂ ಸಂಪತ್ ದ್ವಿತೀಯ ಸ್ಥಾನ ಪಡೆದರು. ಓಟದಲ್ಲಿ ನತೀಶ್ ಪ್ರಥಮ ಸ್ಥಾನ ಗಳಿಸಿದರು. ಮಿಶ್ರ ರಿಲೇಯಲ್ಲಿ ನತೀಶ್ ಬಾರಾಡಿ, ಶರತ್, ಕೃತಿ ಹಾಗೂ ಅನ್ವಿತ್ ಅವರ ತಂಡ ಪ್ರಥಮ ಸ್ಥಾನ ಪಡೆದರೆ, ಗ್ರೀಷ್ಮಾ, ಅನನ್ಯಾ, ಹಿತೇಶ್ ಹಾಗೂ ಪ್ರಶಾಂತ್ ಅವರ ತಂಡ ದ್ವಿತೀಯ ಸ್ಥಾನ ಪಡೆಯಿತು.
ಪುರುಷರ ಫುಟ್‌ಬಾಲ್‌ನಲ್ಲಿ ನತೀಶ್ ಬಾರಾಡಿ, ನಾಗೇಶ್ ಹಾಗೂ ಶರತ್ ಅವರ ತಂಡ ದ್ವಿತೀಯ ಸ್ಥಾನ ಪಡೆಯಿತು. ಹಗ್ಗಜಗ್ಗಾಟದಲ್ಲಿ ಪ್ರಶಾಂತ್, ನತೀಶ್ ಬಾರಾಡಿ, ಪ್ರವೀಣ್, ಸುಕೇಶ್ ಹಾಗೂ ನಾಗೇಶ್ ಅವರ ತಂಡ ಪ್ರಥಮ ಸ್ಥಾನ ಗಳಿಸಿತು.
ಓಪನ್ ವಿಭಾಗದ ಬ್ಯಾಕ್ ರೇಸ್‌ನಲ್ಲಿ ಕೃತಿ ಪ್ರಥಮ ಸ್ಥಾನ ಪಡೆದರು. ಕಾಲೇಜು ವಿಭಾಗದ ಬ್ಯಾಕ್ ರೇಸ್‌ನಲ್ಲಿ ಅನ್ವಿತಾ ಪ್ರಥಮ ಹಾಗೂ ಗ್ರೀಷ್ಮಾ ದ್ವಿತೀಯ ಸ್ಥಾನ ಪಡೆದರು. ಮೂರು ಕಾಲಿನ ಓಟದಲ್ಲಿ ಅನ್ವಿತಾ ಮತ್ತು ಕೃತಿ ಪ್ರಥಮ ಸ್ಥಾನ ಗಳಿಸಿದರು. ಓಟದಲ್ಲಿ ಕೃತಿ ಪ್ರಥಮ ಸ್ಥಾನ ಪಡೆದರು.
ಮಹಿಳೆಯರ ವಿಭಾಗದ ರಿಲೇಯಲ್ಲಿ ಕೃತಿ, ಅನ್ವಿತಾ, ಗ್ರೀಷ್ಮಾ ಹಾಗೂ ಅನನ್ಯಾ ಅವರ ತಂಡ ಪ್ರಥಮ ಸ್ಥಾನ ಪಡೆಯಿತು. ತ್ರೋಬಾಲ್‌ನಲ್ಲಿ ಕೃತಿ, ಶ್ರುತಿ, ಕೃತಿಕಾ, ಅನ್ವಿತಾ, ಗ್ರೀಷ್ಮಾ ಹಾಗೂ ಅನನ್ಯಾ ಅವರ ತಂಡ ಪ್ರಥಮ ಸ್ಥಾನ ಗಳಿಸಿತು.
ಕ್ರೀಡಾಕೂಟದಲ್ಲಿ ಗಾಣಿಗ ಸ್ವಜಾತಿ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಪುರುಷರ ವಿಭಾಗದಲ್ಲಿ 50 ಮೀಟರ್ ಓಟ, ಹಿಮ್ಮುಖ ಓಟ, ಮೂರು ಕಾಲಿನ ಓಟ, ಬಾಲ್ ಥ್ರೋ, ರಿಲೇ ಓಟ, ಹಗ್ಗಜಗ್ಗಾಟ, ಫುಟ್‌ಬಾಲ್ ಹಾಗೂ ವಾಲಿಬಾಲ್ ಸ್ಪರ್ಧೆಗಳು ನಡೆದವು.
ಮಹಿಳೆಯರ ವಿಭಾಗದಲ್ಲಿ 50 ಮೀಟರ್ ಓಟ, ಹಿಮ್ಮುಖ ಓಟ, ಮೂರು ಕಾಲಿನ ಓಟ, ಬಾಸ್ಕೆಟ್‌ಬಾಲ್ ಬಾಲ್ ಥ್ರೋ, ರಿಲೇ ಓಟ, ಹಗ್ಗಜಗ್ಗಾಟ ಹಾಗೂ ತ್ರೋಬಾಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ನಾಲ್ಕು ಜನರ ತಂಡದ ಮಿಶ್ರ ರಿಲೇ ಓಟವೂ ನಡೆಯಿತು.
ವಾಲಿಬಾಲ್, ತ್ರೋಬಾಲ್ ಹಾಗೂ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳಿಗೆ ₹3,000 ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ₹2,000 ನಗದು ಹಾಗೂ ಟ್ರೋಫಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಫುಟ್‌ಬಾಲ್‌ನಲ್ಲಿ ಪ್ರಥಮ ಸ್ಥಾನಕ್ಕೆ ₹2,000 ಹಾಗೂ ದ್ವಿತೀಯ ಸ್ಥಾನಕ್ಕೆ ₹1,000 ನಗದು ಮತ್ತು ಟ್ರೋಫಿ ನೀಡಲಾಯಿತು.
ಕಾರ್ಯಕ್ರಮವನ್ನು ಗಾಣಿಗ ಯುವ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಆಯೋಜಿಸಿದ್ದರು. ಗಾಣಿಗ ಸೇವಾಸಂಘ ಬಂಟ್ವಾಳ ತಾಲೂಕು ಮಾತೃಸಂಸ್ಥೆಯಾಗಿ ಹಾಗೂ ಗಾಣಿಗ ಮಹಿಳಾ ವೇದಿಕೆ ಬಂಟ್ವಾಳ ತಾಲೂಕು ಸಹಸಂಸ್ಥೆಯಾಗಿ ಸಹಕಾರ ನೀಡಿತು.