ಕೇಂದ್ರ ಸರಕಾರ ಕಾರ್ಪೊರೇಟ್ ಸಂಸ್ಥೆಗಳ ಕಾವಲಾಗುವ ಮೂಲಕ ಯುವಜನತೆಗೆ ದ್ರೋಹ ಬಗೆಯುತ್ತಿದೆ: ಡಿವೈಎಫ್‌ಐ ಕೇರಳ ನಾಯಕ ವಿಪಿಪಿ ಮುಸ್ತಫಾ
Sunday, August 9, 2026
ಮುಡಿಪು: "ಕಾರ್ಪೋರೇಟ್ ಶಕ್ತಿಗಳು ಭಾರತದ ಬಹುಪಾಲು ಆಸ್ತಿಯನ್ನು ಕಬಳಿಸುತ್ತಿರುವಾಗ ಅವುಗಳನ್ನು ತಡೆಯುವ ಬದಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೊರೇಟ್ ಗಳ ಕಾವಲಾಳುಗಳಾಗಿ ವರ್ತಿಸುತ್ತಿವೆ." ಎಂದು ಕೇರಳ ರಾಜ್ಯ ಡಿವೈಎಫ್‌ಐ ನ ಮಾಜಿ ನಾಯಕರಾದ ವಿಪಿಪಿ ಮುಸ್ತಫಾ ಹೇಳಿದರು.
ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ ಮುಡಿಪುವಿನಲ್ಲಿ ನಡೆದ ಡಿವೈಎಫ್‌ಐ 16ನೇ ಉಳ್ಳಾಲ ತಾಲ್ಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದೇಶದ ಐಕ್ಯತೆ ಸಹೋದರತೆ ಪರಂಪರೆಯನ್ನು ಕೆಡವುವ ಮೂಲಕ ದೇಶವನ್ನು ಒಡೆಯುವ ಶ್ರಮದಲ್ಲಿದೆ. ವಿವಿಧತೆಯಲ್ಲಿ ಏಕತೆ ಎಂಬ ಸಂಸ್ಕೃತಿಗೆ ಬಿಜೆಪಿ ಸರ್ಕಾರ ಕೊಡಲಿ ಏಟು ಕೊಡುತ್ತಿವೆ. ಇವುಗಳ ಬದಲು ದೇಶದ ಯುವ ಜನತೆಗೆ ಉದ್ಯೋಗವನ್ನು ಕಲ್ಪಿಸುವ ಕಾರ್ಯಗಳಿಗೆ ಕೇಂದ್ರ ಸರಕಾರ ಮುಂದಾಗಬೇಕು. ಉಳ್ಳಾಲ ಪ್ರದೇಶ ಹಾಗೂ ದ.ಕ ಜಿಲ್ಲೆಯುದ್ದಕ್ಕೂ ಹಲವಾರು ಹೋರಾಟಗಳ ಇತಿಹಾಸ ಇದೆ. ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕರು ಪೋರ್ಚುಗೀಸರ ವಿರುದ್ಧ ನಿರಂತರ ಹೋರಾಟ ನಡೆಸಿ ಆ ಹೋರಾಟದ ಕಿಚ್ಚನ್ನು ನಾಡಿನುದ್ದಕ್ಕೂ ವ್ಯಾಪಿಸಿದವರು. ಅಬ್ಬಕ್ಕ ರಾಣಿ ಅವರು ಮೆಟ್ಟಿರುವ ಈ ನಾಡಿನಲ್ಲಿ ಇಂದಿಗೂ ಕಾರ್ಪೋರೇಟ್ ಕಂಪೆನಿಗಳಿಗೆ, ಖಾಸಗಿ ವೈದ್ಯಕೀಯ ಕ್ಷೇತ್ರಗಳಿಗೆ ರಾಜಕಾರಣಿಗಳು ಇದೇ ರೀತಿ ಒಲವು ತೋರಿಸಿ ಸರಕಾರಿ ಸಂಸ್ಥೆಗಳನ್ನು ಕಡೆಗಣಿಸಿದರೆ ಇಲ್ಲಿನ ಯುವಜನತೆ ಬೀದಿಗಿಳಿದು ಹೋರಾಟಗಳನ್ನು ರೂಪಿಸುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ದೇಶದ ನಿರುದ್ಯೋಗ ಸಮಸ್ಯೆಯ ವಿರುದ್ದ ಯುವಜನತೆಯ ಉದ್ಯೋಗಕ್ಕಾಗಿ ಮತ್ತು ದೇಶದ ಐಕ್ಯತೆಯನ್ನು ಕಾಪಾಡುವಲ್ಲಿ ಇಲ್ಲಿನ ಎಡರಂಗ ನಿರಂತರ ಮುಂಚೂಣಿಯಲ್ಲಿರಲಿದೆ" ಎಂದು ಮಾತನಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ವಾಗತ ಸಮಿತಿಯ ಗೌರವ ಸಲಹೆಗಾರ ರಮೇಶ್ ಉಳ್ಳಾಲ "ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರವು ಸಂಪೂರ್ಣ ಹದಗೆಟ್ಟಿವೆ. ಶೈಕ್ಷಣಿಕವಾಗಿ ಮುಂದುವರಿದಿರುವ ನಮ್ಮ ಜಿಲ್ಲೆಯಲ್ಲಿ ವರ್ಷಂಪ್ರತೀ ಸಾವಿರಾರು ವಿಧ್ಯಾರ್ಥಿಗಳು ಶಿಕ್ಷಣವನ್ನು ಪೂರೈಸಿ ಹೊರಬರುತ್ತಿದ್ದರೂ ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ರಾಜ್ಯದ ಆರೋಗ್ಯ ಸಚಿವರು ತಮ್ಮ ಸ್ವ ಕ್ಷೇತ್ರವಾದ ಉಳ್ಳಾಲ ತಾಲ್ಲೂಕಿನಲ್ಲಿ ಸುಸಜ್ಜಿತವಾದ ಸರಕಾರೀ ಆಸ್ಪತ್ರೆಗಳನ್ನು ನಿರ್ಮಿಸಿ ಬಲಪಡಿಸುವುದರ ಬದಲು ಖಾಸಗಿ ಆಸ್ಪತ್ರೆಗಳ ಹಿತವನ್ನು ಕಾಪಾಡುತ್ತಿವೆ" ಎಂದು ಆರೋಪಿಸಿದರು.
ಮುಡಿಪು ಜಂಕ್ಷನ್ ನಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಆರಂಭಿಸಿದ ಡಿವೈಎಫ್ಐ ಉಳ್ಳಾಲ ತಾಲ್ಲೂಕು ಸಮ್ಮೇಳನದ ದ್ವಜಾರೋಹಣವನ್ನು ಡಿವೈಎಫ್‌ಐ ಉಳ್ಳಾಲ ತಾಲ್ಲೂಕು ಸಮಿತಿ ಅಧ್ಯಕ್ಷರಾದ ನಿತಿನ್ ಕುತ್ತಾರ್ ಅವರು ನೆರವೇರಿಸಿದರು. ಸಮ್ಮೇಳನದುದ್ದಕ್ಕೂ ತಾಲ್ಲೂಕಿನ ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಂತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ರಮೇಶ್ ಪುಂಡರಿಕಾಕ್ಷ, ಸ್ವಾಗತ ಸಮಿತಿ ಗೌರವ ಸಲಹೆಗಾರರಾದ ಅಬೂಬಕರ್ ಜಲ್ಲಿ, ಅಬ್ದುಲ್ ಖಾದರ್ ಸಣ್ಣಬೈಲು, ಡಾ. ಜೀವನ್ ರಾಜ್ ಕುತ್ತಾರ್, ಕಾರ್ಯಾಧ್ಯಕ್ಷ ಇಸ್ಮತ್ ಫಜೀರ್, ಅಧ್ಯಕ್ಷ ಅಶ್ರಫ್ ಹರೇಕಳ, ಡಿವೈಎಫ್‌ಐ ಜಿಲ್ಲಾ ನಾಯಕರಾದ ಮನೋಜ್ ವಾಮಂಜೂರು, ಮಾಧುರಿ ಬೋಳಾರ, ಸ್ವಾಗತ ಸಮಿತಿಯ ರಝಾಕ್ ಮುಡಿಪು, ನಿತಿನ್ ಕುತ್ತಾರ್, ರಝಾಕ್ ಮೊಂಟೆಪದವು, ನಾಯಕರಾದ ಅಶ್ಫಾಕ್ ಅಲೇಕಳ, ಅಮೀರ್ ಉಳ್ಳಾಲ, ಸುನಿಲ್ ತೇವುಲ ಮತ್ತಿತರರು ಉಪಸ್ಥಿತರಿದ್ದರು.



