ಗ್ಯಾಸ್ ಸಿಲಿಂಡರ್ ಸ್ಪೋಟ: ಮನೆಗೆ ಹಾನಿ
ಕುರುಳಬಳದ ಹಮೀದ್ ಎಂಬುವರ ಮನೆಯಲ್ಲಿ ಪೂರ್ವಾಹ್ನ 11 ಗಂಟೆಯ ವೇಳೆ ಈ ದುರಂತ ಸಂಭವಿಸಿದೆ. ಮನೆ ಮಾಲಕ ಹಮೀದ್ ಪೇಟೆಗೆ ತೆರಳಿದ್ದ ಸಂದರ್ಭದಲ್ಲಿ, ಅವರ ಪತ್ನಿ ಖೈರುನ್ನಿಸಾ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದರು.
ಈ ವೇಳೆ ಏಕಾಏಕಿ ಗ್ಯಾಸ್ ಸಿಲಿಂಡರ್ನ ರೆಗ್ಯುಲೇಟರ್ ಬಳಿ ಬೆಂಕಿ ಕಾಣಿಸಿಕೊಂಡಿದೆ.ತಕ್ಷಣ ಖೈರುನ್ನಿಸಾ ಬೊಬ್ಬೆ ಹೊಡೆದಿದ್ದು, ಈ ವೇಳೆ ನೆರೆಯ ನಿವಾಸಿ ಉಮರ್ ಎಂಬವರು ಓಡಿಬಂದು ಮನೆಮಂದಿಯನ್ನು ಅಂಗಳಕ್ಕೆ ಕರೆದೊಯ್ದು ರಕ್ಷಿಸಿದ್ದಾರೆ. ಅವರು ಹೊರಗೆ ಬಂದ ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಭೀಕರವಾಗಿ ಸ್ಪೋಟಗೊಂಡು ಛಿದ್ರಗೊಂಡಿದೆ.
ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟು, ಅಡುಗೆ ಕೋಣೆ ಸಂಪೂರ್ಣ ಧ್ವಂಸಗೊಂಡಿದೆ. ಮನೆಯಲ್ಲಿದ್ದ ಗೃಹಬಳಕೆಯ ವಸ್ತುಗಳು, ದಾಖಲೆಗಳು ಹಾಗೂ ಪೀಠೋಪಕರಣಗಳು ಧ್ವಂಸಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ವಿಟ್ಲದ ಇಂಡೇನ್ ಗ್ಯಾಸ್ ವಿತರಕ ‘ಸಾಯಿ ಗಣೇಶ್’ ಸಂಸ್ಥೆಯ ಮಾಲಕ ಸತೀಶ ಆಳ್ವ ಸೇರಿದಂತೆ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.