ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ
Friday, August 21, 2026
ಸೌಹಾರ್ದತೆ, ಶಾಂತಿ ಹಾಗೂ ರಾಷ್ಟ್ರೀಯ ಏಕತೆಗೆ ಸದ್ಭಾವನಾ ದಿನದ ಸಂದೇಶ
ಪುತ್ತೂರು: ವಿವಿಧ ಧರ್ಮ, ಸಮುದಾಯ, ಭಾಷೆ ಹಾಗೂ ಸಂಸ್ಕೃತಿಗೆ ಸೇರಿದ ಜನರ ನಡುವೆ ಏಕತೆ, ಸೌಹಾರ್ದತೆ ಮತ್ತು ಸಾಮರಸ್ಯವನ್ನು ಬೆಳೆಸುವ ಮಹತ್ವವನ್ನು ಸಾರುವ ಉದ್ದೇಶದಿಂದ ಸದ್ಭಾವನಾ ದಿನವನ್ನು ಪಿಜಿ ಸೆಮಿನಾರ್ ಹಾಲ್‌ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂಟೇರೊ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ, ಸದ್ಭಾವನಾ ದಿನದ ಮಹತ್ವ ಹಾಗೂ ಪ್ರಸ್ತುತತೆಯನ್ನು ವಿವರಿಸಿದರು. ಸಮಾಜದಲ್ಲಿ ಶಾಂತಿ, ಸಹೋದರತ್ವ, ಸಹಿಷ್ಣುತೆ ಮತ್ತು ಏಕತೆಯನ್ನು ಉತ್ತೇಜಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿವಿಧ ಧರ್ಮ, ಸಮುದಾಯ, ಭಾಷೆ ಮತ್ತು ಸಂಸ್ಕೃತಿಯ ಜನರ ನಡುವೆ ಪರಸ್ಪರ ಗೌರವ ಹಾಗೂ ಅರ್ಥೈಸಿಕೊಳ್ಳುವ ಮನೋಭಾವ ಬೆಳೆಸುವ ಮೂಲಕ ರಾಷ್ಟ್ರೀಯ ಏಕೀಕರಣವನ್ನು ಮತ್ತಷ್ಟು ಬಲಪಡಿಸಬಹುದು ಎಂದು ಅವರು ಹೇಳಿದರು.
ಸದ್ಭಾವನಾ ದಿನದ ಅಂಗವಾಗಿ ಸದ್ಭಾವನಾ ಪ್ರತಿಜ್ಞೆಯನ್ನು ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂಟೇರೊ ಬೋಧಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಾಮರಸ್ಯ ಹಾಗೂ ರಾಷ್ಟ್ರೀಯ ಏಕತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಸಂಕಲ್ಪ ಮಾಡಿದರು. ಕಾರ್ಯಕ್ರಮವನ್ನು ಪಿಜಿ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಟೆನಿಶಾ ಪಿಂಟೋ ನಿರೂಪಿಸಿದರು.

