ಕಸ್ತೂರಿ ರಂಗನ್ ವರದಿ ವಿರುದ್ಧ ಮತ್ತೆ ಹೋರಾಟಕ್ಕೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಜ್ಜು
ಕುಕ್ಕೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್‌ನಲ್ಲಿ ಆಗಸ್ಟ್ 2ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡಿನ ಗ್ರಾಮೀಣ ಪ್ರದೇಶಗಳ ರೈತರು ಹಾಗೂ ಜನಸಾಮಾನ್ಯರಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆಯ ನೆಪದಲ್ಲಿ ರೈತರಿಗೆ ಸಮಸ್ಯೆಯಾಗುವ ಯೋಜನೆಗಳ ವಿರುದ್ಧ ವೇದಿಕೆ ಪಕ್ಷಾತೀತ, ಜಾತ್ಯಾತೀತ ಹಾಗೂ ಕಾನೂನಾತ್ಮಕವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಪುಷ್ಪಗಿರಿ ವನ್ಯಧಾಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ 48 ಗ್ರಾಮಗಳನ್ನು ಸೇರಿಸುವ ಪ್ರಸ್ತಾವನೆ ಬಂದ ಸಂದರ್ಭದಲ್ಲಿ ಸಂಘಟನೆ ನಡೆಸಿದ ಹೋರಾಟದ ಪರಿಣಾಮವಾಗಿ ಆ ಪ್ರಕ್ರಿಯೆಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವೇದಿಕೆ ಮುಖಂಡರು ತಿಳಿಸಿದರು.
ಅದೇ ರೀತಿ ಕಸ್ತೂರಿ ರಂಗನ್ ವರದಿ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸುವ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಪರಿಣಾಮ ವಿಶೇಷ ಗ್ರಾಮಸಭೆ ನಡೆಸಲು ಸರ್ಕಾರ ಮುಂದಾಗಿತ್ತು. ಬಳಿಕ ಹುಲಿ ಸಂರಕ್ಷಿತ ಪ್ರದೇಶ, ಯುನೆಸ್ಕೊ ಗ್ರೇಟರ್ ತಲಕಾವೇರಿ ಪ್ರದೇಶ, ಆನೆ ಕಾರಿಡಾರ್, ಮೆಡಿಸಿನಲ್ ಪ್ಲಾಂಟೇಶನ್, ಮಾಧವ ಗಾಡ್ಗೀಳ್ ವರದಿ, ಕಸ್ತೂರಿ ರಂಗನ್ ವರದಿ ಹಾಗೂ ಜೀವವೈವಿಧ್ಯ ಸಂರಕ್ಷಣೆಯಂತಹ ವಿವಿಧ ಯೋಜನೆಗಳ ವಿಚಾರದಲ್ಲಿಯೂ ರೈತರ ಹಿತದೃಷ್ಟಿಯಿಂದ ಹೋರಾಟ ನಡೆಸಲಾಗಿದೆ ಎಂದು ಮುಖಂಡರು ಹೇಳಿದರು.
ಕೇಂದ್ರ ಪರಿಸರ ಇಲಾಖೆ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಹಲವು ಬಾರಿ ಕೇಳಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪಕ್ಷಾತೀತವಾಗಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಬೇಡ ಎಂಬ ನಿಲುವನ್ನು ವ್ಯಕ್ತಪಡಿಸಿದೆ. ಆದರೂ ಕೇಂದ್ರ ಪರಿಸರ ಇಲಾಖೆ ಈ ಸಂಬಂಧ ಅಧಿಸೂಚನೆಗಳನ್ನು ಹೊರಡಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ವೇದಿಕೆ ಮುಖಂಡರು ಹೇಳಿದರು.
ಇದೀಗ ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಅಧಿಸೂಚನೆಯಲ್ಲಿಯೂ ಮಲೆನಾಡಿನ ಗ್ರಾಮೀಣ ಪ್ರದೇಶಗಳ ಜನಜೀವನ ಹಾಗೂ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಹಲವು ನಿರ್ಬಂಧಗಳು ಬರುವ ಸಾಧ್ಯತೆ ಇದೆ ಎಂದು ವೇದಿಕೆ ಆರೋಪಿಸಿದೆ. ಕೃಷಿ ಚಟುವಟಿಕೆ, ರಾಸಾಯನಿಕ ಗೊಬ್ಬರ ಬಳಕೆ, ರಸ್ತೆ ಅಭಿವೃದ್ಧಿ ಹಾಗೂ ಇತರ ಮೂಲಭೂತ ಸೌಕರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು.
ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಜನರಿಗೆ ಮಾತ್ರವಲ್ಲದೆ, ಬಾಧಿತ ಗ್ರಾಮಗಳ ಗಡಿಯಿಂದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿರುವ ಗ್ರಾಮಗಳ ಮೇಲೂ ಇದರ ಪರಿಣಾಮ ಬೀರಬಹುದು ಎಂದು ವೇದಿಕೆ ತಿಳಿಸಿದೆ.
"ಮಲೆನಾಡಿನ ರೈತರು ಹಾಗೂ ಜನಸಾಮಾನ್ಯರ ಹಿತ ಕಾಪಾಡಲು ಕಸ್ತೂರಿ ರಂಗನ್ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು" ಎಂದು ಕಿಶೋರ್ ಶಿರಾಡಿ ಎಚ್ಚರಿಕೆ ನೀಡಿದರು.
ವೇದಿಕೆಯ ಹೋರಾಟವು ಯಾವುದೇ ರಾಜಕೀಯ ಪಕ್ಷ ಅಥವಾ ಜಾತಿ-ಧರ್ಮದ ಪರವಾಗಿಲ್ಲ. ಜನಹಿತ, ರೈತರ ಹಕ್ಕು ಹಾಗೂ ಮಲೆನಾಡಿನ ಜನಜೀವನದ ರಕ್ಷಣೆಗಾಗಿ ವಿಷಯಾಧಾರಿತ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಸ್ಪಷ್ಟಪಡಿಸಿದರು.
ವೇದಿಕೆಯಲ್ಲಿ ವಿವಿಧ ಧರ್ಮಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಮತ್ತು ಸದಸ್ಯರು ಇರುವುದರಿಂದ ಪರಸ್ಪರ ನಿಂದನೆ, ಟೀಕೆ ಅಥವಾ ಅವಹೇಳನಕ್ಕೆ ಅವಕಾಶ ನೀಡುವುದಿಲ್ಲ. ಪ್ರತಿಯೊಬ್ಬರ ವ್ಯಕ್ತಿಗೌರವವನ್ನು ಕಾಪಾಡಿಕೊಂಡು ಹೋರಾಟದ ಉದ್ದೇಶಕ್ಕೆ ಧಕ್ಕೆ ಬಾರದಂತೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಿಲನ್ ಬಾಳಿಕಳ, ಜಿಲ್ಲಾ ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ದಾಮೋದರ ಗುಂಡ್ಯ ಹಾಗೂ ಅಶೋಕ್ ಕುಮಾರ್ ಮೂಲೆ ಮಜಲು ಉಪಸ್ಥಿತರಿದ್ದರು.