ಆಳ್ವಾಸ್ ಪ್ರಗತಿ-2026: ಮೂಡುಬಿದಿರೆಯಲ್ಲಿ ಯುವ ನಾಯಕರ ಸಮಾವೇಶ

ಆಳ್ವಾಸ್ ಪ್ರಗತಿ-2026: ಮೂಡುಬಿದಿರೆಯಲ್ಲಿ ಯುವ ನಾಯಕರ ಸಮಾವೇಶ


ಮೂಡುಬಿದಿರೆ: 16ನೇ ಆವೃತ್ತಿಯ ಆಳ್ವಾಸ್ ಪ್ರಗತಿ–2026 ಬೃಹತ್ ಉದ್ಯೋಗ ಮೇಳದ ಯಶಸ್ವಿ ಆಯೋಜನೆಗೆ ಯುವ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅಗತ್ಯವಾಗಿದ್ದು, ಯುವ ನಾಯಕರು ಉದ್ಯೋಗ ಮೇಳದ ಅಧಿಕೃತ ಪಾಲುದಾರರಾಗಿ ಕಾರ್ಯನಿರ್ವಹಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಕರೆ ನೀಡಿದರು.

ಅವರು ಆಳ್ವಾಸ್ ಪ್ರಗತಿ ಹಿನ್ನೆಲೆಯಲ್ಲಿ ಭಾನುವಾರ ಮಿಜಾರಿನಲ್ಲಿ ನಡೆದ ಯುವ ನಾಯಕರ ಸಮಾವೇಶದಲ್ಲಿ ಮಾತನಾಡಿದರು. 

ಕಳೆದ ಎರಡು ದಶಕಗಳಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಯಾವುದೇ ಲಾಭದ ಉದ್ದೇಶವಿಲ್ಲದೆ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ.  ಇಂದಿನ ಉದ್ಯೋಗ ಕ್ಷೇತ್ರದಲ್ಲಿ ಕೇವಲ ಪ್ರಮಾಣಪತ್ರಗಳಿಗೆ ಮಾತ್ರ ಮಹತ್ವವಿಲ್ಲ. ಕೌಶಲ್ಯ, ಆತ್ಮವಿಶ್ವಾಸ ಹಾಗೂ ಕಾರ್ಯಸಾಮರ್ಥ್ಯಕ್ಕೆ ಹೆಚ್ಚಿನ ಮೌಲ್ಯ ದೊರೆಯುತ್ತಿದೆ. ಗ್ರಾಮೀಣ ಭಾಗದ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಮೇಳಕ್ಕೆ ಕರೆತಂದು, ಪೂರ್ವ ತಯಾರಿಯೊಂದಿಗೆ ಆತ್ಮವಿಶ್ವಾಸದಿಂದ ಸಂದರ್ಶನಕ್ಕೆ ಹಾಜರಾಗುವಂತೆ ಪ್ರೇರೇಪಿಸುವ ಜವಾಬ್ದಾರಿ ಯುವ ನಾಯಕರ ಮೇಲಿದೆ ಎಂದರು.

ಈ ಬಾರಿ 343ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಈಗಾಗಲೇ ನೋಂದಣಿ ಮಾಡಿಕೊಂಡಿವೆ. ಡಿಗ್ರಿ, ಬಿ.ಕಾಂ., ಡಿಪ್ಲೊಮಾ, ಐಟಿಐ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ 13ಕ್ಕೂ ಹೆಚ್ಚು ಉದ್ಯೋಗ ವಲಯಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಿದ್ದು, ಅನುಭವ ಹೊಂದಿದವರಿಗೂ ಸೂಕ್ತ ಅವಕಾಶಗಳಿವೆ ಎಂದು ತಿಳಿಸಿದರು.

ಆಳ್ವಾಸ್ ಪ್ರಗತಿ ಕೇವಲ ಉದ್ಯೋಗ ಮೇಳವಲ್ಲ; ಸಾವಿರಾರು ಯುವಕರ ಜೀವನಕ್ಕೆ ಹೊಸ ದಿಕ್ಕು ನೀಡುವ ಸಾಮಾಜಿಕ ಚಳವಳಿಯಾಗಿದೆ. ಸಮಾನ ಅವಕಾಶಗಳನ್ನು ಸೃಷ್ಟಿಸಿ, ಯುವಕರ ಜೀವನದಲ್ಲಿ ಉದ್ದೇಶ ಮೂಡಿಸುವ ವೇದಿಕೆಯಾಗಿದ್ದು, ಯುವ ನಾಯಕರು ಕೈಜೋಡಿಸಿದರೆ ಈ ಕಾರ್ಯ ಇನ್ನಷ್ಟು ಬಲಿಷ್ಠವಾಗಲಿದೆ ಎಂದರು.

ಉದ್ಯೋಗ ಮೇಳದ ಸಿದ್ಧತೆಗಾಗಿ ಕಳೆದ ಮೂರು ತಿಂಗಳಿಂದ 70ಕ್ಕೂ ಹೆಚ್ಚು ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಮೇಳದ ದಿನ ಸುಮಾರು 2,500 ಸ್ವಯಂಸೇವಕರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಭಾನುವಾರವೂ ಸೇವಾ ಮನೋಭಾವದಿಂದ ಸಭೆಯಲ್ಲಿ ಭಾಗವಹಿಸಿದ ಯುವ ನಾಯಕರ ಬದ್ಧತೆಯನ್ನು ಅವರು ಶ್ಲಾಘಿಸಿದರು.

ಹೊರ ಜಿಲ್ಲೆಗಳಿಂದ ಕನಿಷ್ಠ 2,500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸುವಂತೆ ಪ್ರೇರೇಪಿಸುವ ಮೂಲಕ ಗ್ರಾಮೀಣ ಯುವಕರನ್ನು ತಲುಪುವ ಉದ್ದೇಶವನ್ನು ಸಾಕಾರಗೊಳಿಸಬೇಕು ಎಂದು ಕರೆ ನೀಡಿದರು.

ವಿಶ್ವ ಕಬಡ್ಡಿ ಚಾಂಪಿಯನ್‌ಶಿಪ್ ವಿಜೇತ ಭಾರತ ತಂಡದ ಆಟಗಾರ್ತಿ ಹಾಗೂ ಆಳ್ವಾಸ್ ವಿದ್ಯಾರ್ಥಿನಿ ಧನಲಕ್ಷ್ಮೀ ಪೂಜಾರಿ ಗುಜರಾತ್ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ ಪಡೆದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.

ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಯುವ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳನ್ನು ಪ್ರತಿನಿಧಿಸುವ ಯುವ ನಾಯಕರು ಭಾಗವಹಿಸಿ, ಆಳ್ವಾಸ್ ಪ್ರಗತಿ ಕುರಿತು ತಮ್ಮ ಅಭಿಪ್ರಾಯ, ಸಲಹೆ ಮತ್ತು ಸೂಚನೆಗಳನ್ನು ಹಂಚಿಕೊಂಡರು. 

ವಿನಾಯಕ ಭಟ್ ಗಾಳಿಮನೆ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article