ಮಳೆ ಆರ್ಭಟ: ಮುಳುಗಡೆಯಲ್ಲಿ ಇರುವ ಕುಮಾರಧಾರ ಸ್ನಾನಘಟ್ಟ

ಮಳೆ ಆರ್ಭಟ: ಮುಳುಗಡೆಯಲ್ಲಿ ಇರುವ ಕುಮಾರಧಾರ ಸ್ನಾನಘಟ್ಟ


ಸುಬ್ರಹ್ಮಣ್ಯ: ಕಳೆದ ಮೂರು ದಿನಗಳಿಂದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿದ್ದು, ಕುಮಾರಧಾರ ನದಿಯ ಸ್ನಾನಘಟ್ಟ ಮೂರು ದಿನಗಳಿಂದ ಸಂಪೂರ್ಣ ಮುಳುಗಡೆಯಾಗಿದೆ.


ಕುಮಾರಧಾರ ಸ್ನಾನಘಟ್ಟಕ್ಕೆ ತೆರಳುವ ರಸ್ತೆಯ ಮೇಲೆಯೂ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ದೇವಳ ಆಡಳಿತವು ತೀರ್ಥಸ್ನಾನಕ್ಕೆ ಶವರ್ ಹಾಗೂ ನೀರಿನ ಬ್ಯಾರಲ್ ವ್ಯವಸ್ಥೆ ಕಲ್ಪಿಸಿದ್ದು, ನದಿ ತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


ಇನ್ನೊಂದೆಡೆ, ಹರಿಹರ-ಬಾಳುಗೋಡು ಸಂಪರ್ಕಿಸುವ ಬಸವನಗುಡಿ-ಬಾಳುಗೋಡು ಪದಕ ಸಂಪರ್ಕ ಸೇತುವೆಗೆ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದ ಮರದ ದಿಮ್ಮಿಗಳು ಡಿಕ್ಕಿ ಹೊಡೆದ ಪರಿಣಾಮ ಹಾನಿಯಾಗಿದೆ. ಸೇತುವೆಯ ಸುರಕ್ಷತೆ ಕುರಿತು ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.


ಬಲ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭಾರೀ ಮಳೆ ಹಾಗೂ ಗಾಳಿಯಿಂದ ಕೆಲ ಮನೆಗಳಿಗೆ ಹಾನಿಯಾಗಿದೆ. ಕೆಲವು ಮನೆಗಳ ಮೇಲ್ಛಾವಣಿಗಳು ಹಾನಿಗೊಳಗಾಗಿದ್ದು, ಹಲವು ಕಡೆ ವಿದ್ಯುತ್ ಕಂಬಗಳು ಧರೆಗೆ ಉರುಳಿದ ಪರಿಣಾಮ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಹವಾಮಾನ ಇಲಾಖೆ ಇನ್ನೂ ಮಳೆಯ ಸಾಧ್ಯತೆ ಇರುವುದಾಗಿ ಸೂಚಿಸಿರುವ ಹಿನ್ನೆಲೆಯಲ್ಲಿ ನದಿಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ನದಿ ತೀರದ ನಿವಾಸಿಗಳು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article