ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚುವುದು ಅಗತ್ಯ: ಡಾ.ಅಶ್ವಿನಿ ಶೆಟ್ಟಿ
500ಕ್ಕೂ ಅಧಿಕ ಮಂದಿಗೆ ಆರೋಗ್ಯ ತಪಾಸಣೆ:
ಶಿಬಿರದಲ್ಲಿ ಕ್ಯಾನ್ಸರ್, ಸ್ತ್ರೀರೋಗ ಮತ್ತು ಪ್ರಸೂತಿ, ಕಣ್ಣು, ದಂತ, ಕಿವಿ-ಮೂಗು-ಗಂಟಲು, ವೈದ್ಯಕೀಯ ಶಾಸ್ತ್ರ, ಮೂಳೆ, ಚರ್ಮರೋಗ ವಿಭಾಗಗಳಲ್ಲಿ ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಯಿತು. ಅಲ್ಲದೆ ಇಸಿಜಿ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಿ, ಅಗತ್ಯವಿರುವವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು.
ರೋಟರಿ ಫೌಂಡೇಶನ್ ಹಾಗೂ ರೋಟರಿ ಇಂಟರ್‌ನ್ಯಾಷನಲ್‌ನ ದೇಣಿಗೆಯಿಂದ ಒದಗಿಸಿರುವ ವಿಶೇಷ ವಾಹನದಲ್ಲಿ ಸ್ತನ ಕ್ಯಾನ್ಸರ್‌ಗಾಗಿ ಮೆಮೊಗ್ರಫಿ ಹಾಗೂ ಗರ್ಭಕಂಠದ ಕ್ಯಾನ್ಸರ್‌ಗಾಗಿ ಸರ್ವಿಕಲ್ ಕ್ಯಾನ್ಸರ್ ತಪಾಸಣೆ ಸೇರಿದಂತೆ ಮಹಿಳೆಯರಿಗೆ ವಿಶೇಷ ಕ್ಯಾನ್ಸರ್ ತಪಾಸಣಾ ಸೇವೆಗಳನ್ನು ಒದಗಿಸಲಾಯಿತು.
ಶಿಬಿರದಲ್ಲಿ 500ಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದಿದ್ದು, ಅವರಲ್ಲಿ ಹಲವು ಮಂದಿಯಲ್ಲಿ ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಇಂತಹವರಿಗೆ ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆಗೆ ಯೆನೆಪೋಯ ಆಸ್ಪತ್ರೆಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ. ಅಗತ್ಯವಿರುವವರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಯೆನೆಪೋಯ ಆಸ್ಪತ್ರೆಯ ವಿಸ್ತರಣಾ ಮತ್ತು ಜನಸಂಪರ್ಕ ಚಟುವಟಿಕೆಗಳ ನಿರ್ದೇಶಕಿ ಡಾ.ಅಶ್ವಿನಿ ಶೆಟ್ಟಿ ತಿಳಿಸಿದರು.
ಮದುವೆಯಾದ ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳಲಿ:
ಆರೋಗ್ಯವಂತರಂತೆ ಕಂಡುಬಂದರೂ ಕೆಲವೊಮ್ಮೆ ಕ್ಯಾನ್ಸರ್‌ನ ಲಕ್ಷಣಗಳು ಆರಂಭಿಕ ಹಂತದಲ್ಲಿ ಗೋಚರಿಸದಿರುವ ಸಾಧ್ಯತೆಯಿದೆ. ಆದ್ದರಿಂದ ಮದುವೆಯಾದ ಪ್ರತಿಯೊಬ್ಬ ಮಹಿಳೆಯೂ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಹಾಗೂ ಬಾಯಿ ಕ್ಯಾನ್ಸರ್ ಸೇರಿದಂತೆ ಅಗತ್ಯ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಅತ್ಯಗತ್ಯ. ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಪತ್ತೆಯಾದರೆ ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಲು ಸಾಧ್ಯವಿದೆ ಎಂದು ಡಾ.ಅಶ್ವಿನಿ ಶೆಟ್ಟಿ ಹೇಳಿದರು.
ಸಾಮಾನ್ಯವಾಗಿ ಈ ರೀತಿಯ ತಪಾಸಣೆಗೆ ಸುಮಾರು ₹4 ಸಾವಿರ ವೆಚ್ಚವಾಗಲಿದ್ದು, ಶಿಬಿರದ ಮೂಲಕ ಉಚಿತವಾಗಿ ತಪಾಸಣೆ ಮಾಡಿಸಿಕೊಳ್ಳುವ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಶಿಬಿರದಲ್ಲಿ ಯೆನೆಪೋಯ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಅಶ್ವಿನಿ ಶೆಟ್ಟಿ, ಕ್ಯಾನ್ಸರ್ ತಜ್ಞೆ ಡಾ.ವಿನುತಾ ಸೇರಿದಂತೆ ಹಲವು ವೈದ್ಯರು ಸೇವೆ ಸಲ್ಲಿಸಿದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಡಾ.ರವಿ ಕಕ್ಕೆಪದವು, ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ವಿಶ್ವನಾಥ ನಡು ತೋಟ ನಿರೂಪಿಸಿ ದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಗೋಪಾಲ ಎಣ್ಣೆ ಮಜದ್ ಸ್ವಾಗತಿಸಿದರು. ರೋಟರಿ ಅಧ್ಯಕ್ಷ ರೋಹಿತ್ ಬಿಬಿ ಧನ್ಯವಾದ ಸಮರ್ಪಿಸಿದರು.

