ವಿದ್ಯುತ್ ಆಘಾತದಿಂದ ಮೃತಪಟ್ಟ ಕುಟುಂಬಕ್ಕೆ 2 ಲಕ್ಷ ವಿಮೆ ಹಾಗೂ ಪರಿಹಾರದ ಆದೇಶ ಪತ್ರ ಹಸ್ತಾಂತರ
ಉಚ್ಚಿಲ ನಯಾಪಟ್ಣದ ಟ್ರಾನ್ಸ್ ಪಾರ್ಮರ್‌ನ ದುರಸ್ಥಿಯ ವೇಳೆ ಜಿಒಎಸ್ ಆಫ್ ಆಗಿದೆಯೆಂದು ಗ್ರಹಿಸಿ ಟ್ರಾನ್ಸ್ ಫಾರ್ಮರ್ ಏರಿದ ಝಮೀರ್ ವಿದ್ಯುತ್ ಆಘಾತಕ್ಕೊಳಗಾಗಿ ಕೆಳಗೆಸೆಯಲ್ಪಟ್ಟು ಸಾವನ್ನಪ್ಪಿದ್ದರು.
ಸೋಮೇಶ್ವರ ಪುರಸಭೆ ವ್ಯಾಪ್ತಿಯ ಅಂಬಿಕಾರೋಡ್ ಪಿಲಾರುವಿನ ಮೃತ ಶೇಖ್ ಜಮೀರ್ ಮನೆಗೆ ಭೇಟಿ ನೀಡಿದ ಸಚಿವ ಖಾದರ್ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಅವರು ಸರಕಾರ ಹಾಗೂ ಮೆಸ್ಕಾಂನಿಂದ ಸಿಗಬೇಕಾದ ಒಂದು ಕೋಟಿ ರೂ. ವಿಮೆ ಹಾಗೂ ಮೂವತ್ತೆರಡು ಲಕ್ಷ ರೂ. ಪರಿಹಾರ, ತಿಂಗಳ ಪೆನ್ಷನ್, ಮಡದಿ ಅಥವಾ ಮಗಳಿಗೆ ಉದ್ಯೋಗ ಭದ್ರತೆ ಸೇರಿದಂತೆ ಏನೆಲ್ಲಾ ಸವಲತ್ತುಗಳು ಸಿಗಲಿವೆಯೋ ಅದನ್ನು ಮೃತರ ಕುಟುಂಬಸ್ಥರ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು. ಜಮೀರ್ ಅವರ ಅಕಾಲಿಕ ಅಗಲಿಕೆಯು ಮೆಸ್ಕಾಂ ಇಲಾಖೆ ಹಾಗೂ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ನಾವು ಎಷ್ಟೇ ಸಂತಾಪ ಪರಿಹಾರ ನೀಡಿದರೂ ಸಹ ಜಮೀರನ್ನು ಕಳಕೊಂಡ ದುಃಖವನ್ನು ಸಹಿಸುವ ಶಕ್ತಿಯನ್ನು ಮಾತ್ರ ದೇವರೇ ಸಂತ್ರಸ್ತ ಕುಟುಂಬಕ್ಕೆ ಕರುಣಿಸಬೇಕೆಂದರು.
ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದಯಾನಂದ್, ಸೋಮೇಶ್ವರ ಶಾಖೆ ಶಾಖಾಧಿಕಾರಿ ನಿತೇಶ್ ಹೊಸಗದ್ದೆ, ಮಂಗಳೂರು ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಲೋಹಿತ್ ಮತ್ತಿತರರು ಉಪಸ್ಥಿತರಿದ್ದರು.