ಪೌರಕಾರ್ಮಿಕರ ಸಣ್ಣ ಕಾಯಕಕ್ಕೂ ಸಮಾಜದ ಮೇಲೆ ದೊಡ್ಡ ಪ್ರಭಾವವಿದೆ: ಶಶಿಧರ್ ಪೊಯ್ಯತ್ತಬೈಲ್
ಅವರು ಹಸಿರು ದಳ ಮಂಗಳೂರು, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತೊಕ್ಕೊಟ್ಟು ಹಾಗೂ ಲಯನ್ಸ್ ಕ್ಲಬ್ ಅಮ್ಚೂರು ಇವರ ಸಂಯುಕ್ತ ಆಶ್ರಯದಲ್ಲಿ ಕೊಲ್ಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಇಂದು ನಡೆದ ತ್ಯಾಜ್ಯ ಕಾರ್ಮಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾಜದ ಆರೋಗ್ಯ ಮತ್ತು ಪರಿಸರವನ್ನು ಕಾಪಾಡಲು ಮುಂದೆ ಬರುವವರ ಧ್ವನಿಗೆ ಮಾಧ್ಯಮ ಸದಾ ಬೆಂಬಲವಾಗಿ ನಿಲ್ಲಲಿದೆ. ಉತ್ತಮ ಕಾರ್ಯಗಳಿಗೆ ಪ್ರಚಾರ ನೀಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮಾಧ್ಯಮದ ಜವಾಬ್ದಾರಿಯಾಗಿದೆ. ಜನಶಿಕ್ಷಣ ಟ್ರಸ್ಟ್ ನಿರಂತರವಾಗಿ ಹೇಳುತ್ತಾ ಬಂದಿರುವ “ಪ್ಲಾಸ್ಟಿಕ್ ಸುಡದಿರಿ, ಬಾಳು ಸುಖವಾಗಿರಲಿ” ಎಂಬ ಸಂದೇಶವನ್ನು ಹಸಿರು ದಳವೂ ಮುಂದುವರಿಸಿಕೊಂಡು ಬರುತ್ತಿದೆ. ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯದ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.
ಲಯನ್ಸ್ ಕ್ಲಬ್ ಅಮ್ಟೂರು ಇದರ ಅಧ್ಯಕ್ಷ ವಿಲೆಟ್ ಪಿರೇರಾ ಮಾತನಾಡಿ, ಪೌರಕಾರ್ಮಿಕರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಸಮಾಜದ ಸ್ವಚ್ಛತೆ ಹಾಗೂ ಆರೋಗ್ಯವನ್ನು ಕಾಪಾಡುವ ಅವರ ಕಾಯಕಕ್ಕೆ ಗೌರವ ಸಲ್ಲಿಸಬೇಕು. ಸಮಾಜದ ಒಳಿತಿಗಾಗಿ ದುಡಿಯುವ ಪೌರಕಾರ್ಮಿಕರ ಬೆನ್ನಿಗೆ ನಿಂತು, ಅವರ ಆರೋಗ್ಯ ಮತ್ತು ಸುರಕ್ಷತೆಗೆ ಅಗತ್ಯ ಬೆಂಬಲ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇಲ್ಲಿನ ವೈದ್ಯಾಧಿಕಾರಿ ಡಾ. ಬಿಂದು, ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಕೊಲ್ಯ ಇದರ ಅಧ್ಯಕ್ಷ ಶೇಷಪ್ಪ ಬೈದ್ಯಮನೆ ಉಪಸ್ಥಿತರಿದ್ದರು.
ಹಸಿರುದಳ ವ್ಯವಸ್ಥಾಪಕ ನಾಗರಾಜ್ ಬಜಾಲ್ ಪ್ರಾಸ್ತಾವಿಕ ಮಾತನಾಡಿದರು. ರಚಿತಪ್ರಿಯ ಸ್ವಾಗತಿಸಿದರು.ಶ್ರಾವ್ಯ ನಿರೂಪಿಸಿದರು. ಹಸಿರುದಳ ಸುಪ ರ್ ವೈಸರ್ ಶಾಂತಪ್ಪ ವಂದಿಸಿದರು.