ಸೌಜನ್ಯ ಪ್ರಕರಣ-ತನಿಖೆ ಯಾರೇ ಮಾಡಲಿ ನ್ಯಾಯಯುತವಾಗಿ ಮಾಡಲಿ: ತಿಮರೋಡಿ
ಇಂದು ಬೆಳ್ತಂಗಡಿಯ ತನ್ನ ಮನೆಯಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಗೃಹಮಂತ್ರಿಗಳೇ ಉತ್ತರದಾಯಿತ್ವ ಹೊಂದಿದ್ದಾರೆ. ಅವರು ನ್ಯಾಯಯುತವಾಗಿ ತನಿಖೆ ನಡೆಸುವಂತೆ ನೋಡಿಕೊಳ್ಳಬೇಕು. ಈ ಪ್ರಕರಣದಲ್ಲಿ ಸಂತೋಷ್ ರಾವ್ ಅಲ್ಲದಿದ್ದರೆ ಇನ್ಯಾರು ಈ ಕೃತ್ಯ ಎಸಗಿರುವುದು ಎಂಬುದನ್ನು ಎಸ್‌ಐಟಿ ತನಿಖೆ ನಡೆಸಿ ಸೌಜನ್ಯಳಿಗೆ ನ್ಯಾಯ ಸಿಕೊಡಬೇಕು ಎಂದರು.
ಅಕ್ಟೋಬರ್ 10, 2026 ಕ್ಕೆ ಸೌಜನ್ಯ ದಾರುಣ ಸಾವು ಕಂಡು 14 ವರ್ಷಗಳು ಪೂರ್ಣಗೊಳ್ಳಲಿದ್ದು, ಇಷ್ಟು ವರ್ಷಗಳ ಕಾಲ ನ್ಯಾಯ ಮರೀಚಿಕೆಯಾಗಿ ಉಳಿದಿತ್ತು.
ಸೌಜನ್ಯ ತಾಯಿ ಕುಸುಮಾವತಿ ಅವರು ಸಲ್ಲಿಸಿದ್ದ ಎಸ್‌ಎಲ್ಪಿ ಅರ್ಜಿಯ (SLP 5763/26) ವಿಚಾರಣೆ ನಡೆಸಿರುವ ಸರ್ವೋಚ್ಚ ನ್ಯಾಯಾಲಯವು, ಸೆಪ್ಟೆಂಬರ್ 22, 2026 ರಂದು ಹೊಸ ಎಸ್‌ಐಟಿ (SIT) ರಚಿಸಿ ಮರುತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
2012ರಲ್ಲಿ ಕರ್ನಾಟಕ ರಾಜ್ಯ ಪೊಲೀಸರು ಮತ್ತು ತದನಂತರ ಕೇಂದ್ರದ ಸಿಬಿಐ ನಡೆಸಿದ ಕಳಪೆ ತನಿಖೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, “ನೀವು ಯಾರನ್ನು ರಕ್ಷಣೆ ಮಾಡಲು ತನಿಖೆ ಮಾಡಿದ್ದೀರಿ?” ಎಂದು ಪ್ರಶ್ನಿಸಿರುವುದು ಪ್ರಭಾವಿಗಳನ್ನು ರಕ್ಷಿಸುತ್ತಿರುವ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಈ ಸುದೀರ್ಘ ಹೋರಾಟದ ಬಳಿಕ ಮರುತನಿಖೆಗೆ ಆದೇಶ ಹೊರಬಂದಿರುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಐತಿಹಾಸಿಕ ಮೈಲಿಗಲ್ಲು ಹಾಗೂ ಅಸಹಾಯಕ ಜನಸಾಮಾನ್ಯರಿಗೆ ನಂಬಿಕೆ ಮೂಡಿಸುವ ಆಶಾಕಿರಣವಾಗಿದೆ ಎಂದರು.
ಹೋರಾಟಗಾರ ಗಿರೀಶ್ ಮಟ್ಟೆಣ್ಣವರ ಮಾತನಾಡಿ, ತನಿಖೆಯನ್ನು ಯಾರು ಬೇಕಾದರೂ ಮಾಡಲಿ, ಆದರೆ ನ್ಯಾಯಯುತವಾಗಿ, ರೋಸ್ಟರ್ ಅಥವಾ ಪೊಲೀಸ್ ಕಾನ್ಸ್ಟೆಬಲ್ ನೇತೃತ್ವದ ತಂಡದಿಂದ ಆದರೂ ಸರಿಯೇ, ನಿಜವಾದ ಅಪರಾಧಿಗಳು ಯಾರೆಂಬುದು ಹೊರಬರಬೇಕು. ಗೃಹಮಂತ್ರಿಗಳು ಇದಕ್ಕೆ ಉತ್ತರದಾಯಿಯಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
ಸಿಬಿಐ ಹಾಗೂ ಹಿಂದಿನ ತನಿಖೆಗಳ ವೈಫಲ್ಯ:
ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ ತನಿಖೆಯನ್ನೇ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು ಸಿಬಿಐ ಯಾರನ್ನು ರಕ್ಷಿಸಲು ಪ್ರಯತ್ನಿಸಿತ್ತು ಎಂಬದನ್ನು ಸ್ಪಷ್ಟಪಡಿಸುತ್ತದೆ. ಲೋಕಾಯುಕ್ತ ಒಂದು ಬಾರಿ, ಸಿಐಡಿ ಎರಡು ಬಾರಿ ಹಾಗೂ ನಂತರ ಸಿಬಿಐ ತನಿಖೆ ನಡೆಸಿದರೂ ನಿಜವಾದ ಆರೋಪಿಗಳನ್ನು ಪತ್ತೆ ಮಾಡಿಲ್ಲ.
ಹೊಸದಾಗಿ ರಚನೆಯಾಗಿರುವ ಎಸ್‌ಐಟಿ ತಂಡ ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸಾಕ್ಷಿದಾರರಿಗೆ ಬೆದರಿಕೆ ಹಾಕುವ ಘಟನೆಗಳು ಮರುಕಳಿಸಬಾರದು, ಹಾಗೇನಾದರೂ ಆದರೆ ಅಂತಹ ಅಧಿಕಾರಿಗಳು ಅಮಾನತುಗೊಳ್ಳುವುದು ಖಚಿತ ಎಂದು ಎಚ್ಚರಿಸಲಾಗಿದೆ. ನಾವು ಸಾಕ್ಷಿ ನೀಡುವುದಿಲ್ಲ ಎಂಬ ಸಾರ್ವಜನಿಕ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಸಾಕ್ಷಿ ಸಲ್ಲಿಸಲಿದ್ದೇವೆ ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ಹಿಂದೆ ರಚಿಸಲಾದ ಎಸ್‌ಐಟಿ ತನಿಖಾ ತಂಡದ ವರದಿ ಹಿನ್ನೆಲೆಯಲ್ಲಿ, ರಾಜ್ಯ ಮಹಿಳಾ ಆಯೋಗವು ತನಿಖೆ ಮುಂದುವರೆಸಲು ಕೋರಿದ್ದರೂ ಸರ್ಕಾರ ವರದಿಯನ್ನು ಬಹಿರಂಗಪಡಿಸದೆ ಮುಚ್ಚಿಟ್ಟಿದೆ. ತಕ್ಷಣ ವರದಿಯನ್ನು ಬಹಿರಂಗಪಡಿಸಬೇಕು ಎಂದರು.