ಸೌಜನ್ಯ ಪ್ರಕರಣ: ಅ.10 ರಂದು ನ್ಯಾಯದ ನಡಿಗೆ
ಬೆಳ್ತಂಗಡಿ: ಉಜಿರೆ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಹಿನ್ನೆಲೆಯಲ್ಲಿ ಅ.10 ರಂದು ನ್ಯಾಯದ ನಡಿಗೆ ಮೂಲಕ ಉಜಿರೆಯಿಂದ ಬೆಳ್ತಂಗಡಿವರೆಗೆ 5 ಕಿ.ಮೀ ಕಾಲ್ನಡಿಗೆ ಜಾಥಾ ಹಾಗೂ ಅಭಿನಂದನಾ ಸಮಾರಂಭ ನಡೆಸಿ ಪ್ರಕರಣ ಸಂಬಂಧ ಬೆಂಬಲಿಸಿದ ವಕೀಲರು, ಹೋರಾಟಗಾರರನ್ನು ಅಭಿನಂದಿಸಲಾಗುವುದು ಎಂದು ಸೌಜನ್ಯ ಪರ ನ್ಯಾಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಿಳಿಸಿದ್ದಾರೆ.
ತನ್ನ ಮನೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನ್ಯಾಯ ನಡೆ ಅಭಿನಂದನಾ ಸಭೆ ನಡೆಯಲಿದ್ದು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಸ್ವಾಗತಿಸಿದ ಅವರು, ಹೋರಾಟವನ್ನು ಬೆಂಬಲಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸಲು ನ್ಯಾಯದ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಹೋರಟಗಾರ ಗಿರೀಶ್ ಮಟ್ಟೆಣ್ಣನವರ್ ಮಾತನಾಡಿ, ಈ ಹಿಂದೆ CID ತನಿಖಾಧಿಕಾರಿಗಳು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದರು. ಈ ಬಾರಿ ಅಂತಹ ಘಟನೆ ನಡೆಯಬಾರದು. SIT ವರದಿ ಎಲ್ಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್, ಗೋವಿಂದ ಕಾರಜೋಳ ಸೇರಿದಂತೆ ಅನೇಕರು ಪ್ರಶ್ನಿಸಿದ್ದಾರೆ. ನಾವು ಕೂಡ ಕೇಳುತ್ತಿದ್ದೇವೆ. ಬಂಗ್ಲೆ ಗುಡ್ಡದಲ್ಲಿ ಲಭ್ಯವಾದ ಅಸ್ಥಿಪಂಜರಗಳು ಕ್ರೂರವಾಗಿ ಕೊಲೆಯಾದವರು ಎಂದು FSL ವರದಿ ತಿಳಿಸಿದೆ. ಆದರೆ ಈ ವರದಿಗಳು ಎಲ್ಲೂ ಇಲ್ಲ. ಆಸಿಡ್ ದಾಳಿಗೆ ಒಳಗಾದ ಮಹಿಳೆ ಕೊಲೆ ಪ್ರಕರಣದ ಆರೋಪಿ ನಾಪತ್ತೆ, ಲಾಡ್ಜ್ನಲ್ಲಿ ಬಾಯಿಗೆ ಬಟ್ಟೆ ಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ನಾಪತ್ತೆ. ಇದು ನಾವು ಹೇಳುತ್ತಿಲ್ಲ, SIT ಅಧಿಕಾರಿಗಳೇ ಉಲ್ಲೇಖಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರದ ಬಾಯಿಗೆ ಕೈ ಇಡಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ. ಆದರೆ ಸರ್ಕಾರ ಇದನ್ನೆಲ್ಲ ಯಾಕೆ ಮುಚ್ಚಿಡುತ್ತಿದೆ? ಎಂದು ಪ್ರಶ್ನಿಸಿದರು.
ಸೌಜನ್ಯ ಸಹಾಯವಾಣಿ ಆರಂಭಿಸಿ..
ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿ ಬಾಲಕಿಯರ ಸುರಕ್ಷತೆಗಾಗಿ ರಾಜ್ಯ ಸರ್ಕಾರ “ಸೌಜನ್ಯ ಸಹಾಯವಾಣಿ” ತೆರೆಯಬೇಕು ಹಾಗೂ ಕಾಮುಕ, ಸಮಾಜಘಾತುಕ ವ್ಯಕ್ತಿಗಳಿಂದ ಜನರನ್ನು ರಕ್ಷಿಸುವ ಭರವಸೆ ನೀಡಬೇಕು ಎಂದರು.
ಸೌಜನ್ಯ ತಾಯಿ ಕುಸುಮಾವತಿ ಚಂದಪ್ಪಗೌಡ ಮಾvನಾಡಿ, ತನಿಖಾಧಿಕಾರಿಯಾಗಿ ಶಶಿಕುಮಾರ್ ಅವರ ನೇಮಕದ ಬಗ್ಗೆಯೂ ಕೆಲವು ಆರೋಪಗಳಿದ್ದು, ಅವರು ಪ್ರಕರಣದ ತನಿಖೆ ಅತ್ಯಂತ ನಿಷ್ಪಕ್ಷಪಾತವಾಗಿ ಹಾಗೂ ಉತ್ತಮ ರೀತಿಯಲ್ಲಿ ನಡೆಯಬೇಕು ಎಂದರು.
ಅನಿಲ್ ಅಂತರ ಉಪಸ್ಥಿತರಿದ್ದರು.