ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ: ರಮಿತಾ ಸೂರ್ಯವಂಶಿ

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ: ರಮಿತಾ ಸೂರ್ಯವಂಶಿ


ಕಾರ್ಕಳ: ಗ್ರಾಮೀಣ ಭಾಗದ ಮಹಿಳೆಯರಿಗೆ ಸೇವೆ ನೀಡುತ್ತಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಾಗೂ ವೈದ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ  ಹಾಕಿದ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ಪೊಲೀಸ್ ಠಾಣೆಯಲ್ಲಿ ಕೇವಲ ಮುಚ್ಚಳಿಕೆ ಬರೆಸಿಕೊಂಡು ನಿಂದಿಸಿದ ವ್ಯಕ್ತಿಯನ್ನು ಬಿಟ್ಟು ಕಳಿಸಿರುವುದು ಖೇದಕರ , ಇಂತಹ ಪ್ರಕರಣಗಳಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ವೈದ್ಯರ ಬೆನ್ನಿಗೆ ನಿಲ್ಲಬೇಕು ಹೊರತು ಆರೋಪಿಯನ್ನು ರಕ್ಷಿಸಲು ಬೆಂಬಲ ನೀಡುವವರಿಗೆ ಸಹಕಾರ ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಆಗ್ರಹಿಸಿದರು.

ಕಾರ್ಕಳ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಸ್ತ್ರೀರೋಗ ತಜ್ಞರ ಕೊರತೆಯಿತ್ತು. ಈ ವಿಚಾರ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರ ಗಮನಕ್ಕೆ ಬಂದ ಬಳಿಕ ಸ್ತ್ರೀರೋಗ ತಜ್ಞರ ನೇಮಕವಾಗಿದ್ದು,  ಡಾ. ಸಾಹಿತ್ಯ ಅವರು ಸೇವೆ ಸಲ್ಲಿಸುತ್ತಿದ್ದಾರೆ 

ಡಾ. ಸಾಹಿತ್ಯ ಅವರ ಸೇವೆಯಿಂದ ಆಸ್ಪತ್ರೆಯಲ್ಲಿ ಹೆರಿಗೆ ಸೇವೆ ಸುಧಾರಿಸಿದ್ದು, ವೈದ್ಯಕೀಯವಾಗಿ ಸಾಧ್ಯವಿರುವ ಸಂದರ್ಭಗಳಲ್ಲಿ ಸಾಮಾನ್ಯ ಹೆರಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಜೆಯ ಸಂದರ್ಭದಲ್ಲಿಯೂ ಅಗತ್ಯವಿದ್ದಾಗ ಆಸ್ಪತ್ರೆಗೆ ಆಗಮಿಸಿ ಹೆರಿಗೆ ಸೇವೆ ನೀಡಿರುವುದು ಅವರ ಸೇವಾ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಆಸ್ಪತ್ರೆಯಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿದ ಅವರು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿರುವ ಪ್ರದೇಶಕ್ಕೆ ವ್ಯಕ್ತಿಯೊಬ್ಬರು ಪ್ರವೇಶಿಸಿದ ವಿಚಾರದಲ್ಲಿ ವೈದ್ಯರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ವಿವಾದ ಉಂಟಾಗಿದೆ. ಈ ಸಂದರ್ಭದಲ್ಲಿ ವೈದ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪವಿದೆ ಎಂದರು.

ಈ ಸಂಬಂಧ ವೈದ್ಯರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಲಭ್ಯ ದಾಖಲೆಗಳನ್ನು ಪರಿಶೀಲಿಸಿ ವಾಸ್ತವಾಂಶ ಹೊರತರಬೇಕು ಎಂದು ಅವರು ಒತ್ತಾಯಿಸಿದರು.

ವೈದ್ಯರು ಕರ್ತವ್ಯ ನಿರ್ವಹಿಸುವಾಗ ಅವರಿಗೆ ಅಡ್ಡಿಪಡಿಸುವುದು ಅಥವಾ ಬೆದರಿಕೆ ಹಾಕುವುದು ಸರಿಯಲ್ಲ. ಇಂತಹ ಘಟನೆಗಳಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯಲ್ಲಿ ಅಸುರಕ್ಷಿತ ಭಾವನೆ ಮೂಡಬಾರದು. ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ, ಆರೋಪಗಳು ಸಾಬೀತಾದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ರಮಿತಾ ಸೂರ್ಯವಂಶಿ ಆಗ್ರಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article