16 ಗ್ರಾಂ ಎಂಡಿಎಂಎ ಮಾದಕ ವಸ್ತು ವಶ: ಬಂಧನ
Wednesday, September 30, 2026
ಮಂಗಳೂರು: ಎಂಡಿಎಂಎ ಮಾದಕ ವಸ್ತು ಹೊಂದಿದ ಆರೋಪದಲ್ಲಿ ಯುವಕನೋರ್ವನನ್ನು ಕಾವೂರು ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕೋಟೆಕಾರ್ ಅಜ್ಜಿನಡ್ಕ ನಿವಾಸಿ ಮುಹಮ್ಮದ್ ಇರ್ಫಾನ್ ಎ.ಕೆ. (26) ಬಂಧಿತ ಆರೋಪಿ. ಆತನಿಂದ 16 ಗ್ರಾಂ ತೂಕದ 1.60 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆ.29ರಂದು ಮರಕಡ ಗ್ರಾಮದ ಬೊಂದೇಲ್ ನಿಂದ ಮೂಡುಶೆಡ್ಡೆ ಕಡೆಗೆ ಹೋಗುವ ರಸ್ತೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿ ಇರ್ಫಾನ್ ವಿಚಾರಿಸಿದಾಗ ಮಾದಕ ವಸ್ತು ಹೊಂದಿರುವುದು ಪತ್ತೆಯಾಗಿದೆ. ಆತನ ವಿರುದ್ಧ ಅ.ಕ್ರ.128/2026 ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ವಿರುದ್ಧ ಈಗಾಗಲೇ ಉಳ್ಳಾಲ ಠಾಣೆಯಲ್ಲಿ ಕಳ್ಳತನ, ಗಾಂಜಾ ಸೇವನೆ ಮತ್ತು ಪುಂಜಾಲಕಟ್ಟೆ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.