ಸನಾತನ ಪರಂಪರೆಯ ಮೂಲ ಅರಸಿ ಕುಂದಾಪುರಕ್ಕೆ ಬಂದ ವಿದೇಶಿ ಮಹಿಳೆ: ಹಿಂದೂ ಧರ್ಮಕ್ಕೆ ಆಕರ್ಷಿತರಾಗಿ ‘ಗೌರಿ’ ಎಂದು ನಾಮಕರಣ: ವೇದಾಂತ ಅಧ್ಯಯನ, ಶಿವನಾಮ ಜಪ

ಸನಾತನ ಪರಂಪರೆಯ ಮೂಲ ಅರಸಿ ಕುಂದಾಪುರಕ್ಕೆ ಬಂದ ವಿದೇಶಿ ಮಹಿಳೆ: ಹಿಂದೂ ಧರ್ಮಕ್ಕೆ ಆಕರ್ಷಿತರಾಗಿ ‘ಗೌರಿ’ ಎಂದು ನಾಮಕರಣ: ವೇದಾಂತ ಅಧ್ಯಯನ, ಶಿವನಾಮ ಜಪ


ಕುಂದಾಪುರ: ಭಾರತೀಯ ಸನಾತನ ಪರಂಪರೆ ಹಾಗೂ ಹಿಂದೂ ಸಂಸ್ಕೃತಿಯ ಜೀವನಮೌಲ್ಯಗಳು ಜಗತ್ತಿನಾದ್ಯಂತ ಅದೆಷ್ಟೋ ಜನರನ್ನು ಆಕರ್ಷಿಸುತ್ತಿವೆ. ಇದಕ್ಕೆ ಮತ್ತೊಂದು ಜೀವಂತ ನಿದರ್ಶನವಾಗಿ ಕಂಡುಬಂದಿದ್ದಾರೆ ವಿದೇಶಿ ಮಹಿಳೆ ‘ಗೌರಿ’. ಮೂಲತಃ ಸ್ವೀಡನ್ ದೇಶದವರಾಗಿದ್ದು, ಪ್ರಸ್ತುತ ಸ್ಪೇನ್‌ನಲ್ಲಿ ನೆಲೆಸಿರುವ ಇವರು, ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಬೇರುಗಳನ್ನು ಹುಡುಕಿಕೊಂಡು ಕುಂದಾಪುರಕ್ಕೆ ಬಂದಿರುವುದು ವಿಶೇಷ! 


ಹಲವು ವರ್ಷಗಳಿಂದ ಹಿಂದೂ ಧರ್ಮ ಮತ್ತು ಪರಂಪರೆಗೆ ಮಾರುಹೋಗಿರುವ ಗೌರಿ, ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಪ್ರಕೃತಿ ಪ್ರೇಮ, ಗೋಸಂರಕ್ಷಣೆ ಹಾಗೂ ಯೋಗ-ಧ್ಯಾನಕ್ಕೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ತಮಗೆ ಬಿಡುವು ಸಿಕ್ಕಾಗಲೆಲ್ಲ ಭಾರತಕ್ಕೆ ಆಗಮಿಸುವ ಇವರು, ಕುಂದಾಪುರ ತಾಲೂಕಿನ ಆಲೂರಿನ ‘ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ’ಕ್ಕೆ ಭೇಟಿ ನೀಡುವುದನ್ನು ರೂಢಿಸಿಕೊಂಡಿದ್ದಾರೆ. ಇಲ್ಲಿನ ಹಸಿರು ಪರಿಸರದಲ್ಲಿ ಯೋಗ, ಧ್ಯಾನದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ, ಗೋಶಾಲೆಯಲ್ಲಿ ಗೋವುಗಳೊಂದಿಗೆ ಕಾಲ ಕಳೆಯುವುದು ಇವರ ನೆಚ್ಚಿನ ದಿನಚರಿ.

ಹಿಂದೂ ಧರ್ಮದ ಮೇಲಿನ ಅಪಾರ ಭಕ್ತಿಯಿಂದಾಗಿ ಇವರು ತಮ್ಮ ಮೂಲ ಹೆಸರನ್ನು ‘ಗೌರಿ’ ಎಂದು ಬದಲಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ನಾನು ಹಿಂದೂ ಧರ್ಮ ಮತ್ತು ಸನಾತನ ಸಂಸ್ಕೃತಿಗೆ ಮನಸೋತು, ನನ್ನ ಗುರುಗಳಾದ ಸ್ವಾಮಿ ಈಶಾನಂದ ಸರಸ್ವತಿಯವರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ‘ಗೌರಿ’ ಎಂದು ನಾಮಕರಣ ಮಾಡಿಕೊಂಡಿದ್ದೇನೆ. ಸದ್ಯ ನಾನು ಅದ್ವೈತ ವೇದಾಂತದ ಗಂಭೀರ ಅಧ್ಯಯನ ನಡೆಸುತ್ತಿದ್ದೇನೆ. ನನಗೆ ಚಿತ್ರಕೂಟದ ವಾತಾವರಣ, ಇಲ್ಲಿನ ಸಿಬ್ಬಂದಿಯ ಆಪ್ತತೆ ಮತ್ತು ಹಳ್ಳಿ ಪರಿಸರ ಅತ್ಯಂತ ಮೆಚ್ಚಿಕೆಯಾಗಿದೆ . ಇಲ್ಲಿಗೆ ಭೇಟಿ ನೀಡುತ್ತಿರುವುದು ಇದು ಮೂರನೇ ಬಾರಿ. ಗೋವುಗಳ ಒಡನಾಟ ನನಗೆ ಅಪಾರ ಮಾನಸಿಕ ನೆಮ್ಮದಿ ನೀಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ದೇಹ ಪ್ರಕೃತಿಗೆ ತಕ್ಕಂತೆ ಇಲ್ಲಿ ಸೂಕ್ತ ಆಯುರ್ವೇದ ಆರೈಕೆ ದೊರೆಯುತ್ತದೆ,” ಎಂದು ಸಂತಸ ಹಂಚಿಕೊಂಡರು.

ಕುಂದಾಪುರ ಭೇಟಿಯ ನಂತರ ಅವರು ತಮಿಳುನಾಡಿನ ತಿರುವಣ್ಣಾಮಲೈಯಲ್ಲಿರುವ ಪ್ರಸಿದ್ಧ ರಮಣ ಮಹರ್ಷಿ ಆಶ್ರಮಕ್ಕೆ ತೆರಳುವುದಾಗಿ ತಿಳಿಸಿದ್ದಾರೆ.

ಗೌರಿಯವರ ಶ್ರದ್ಧೆಯ ಕುರಿತು ಮಾತನಾಡಿದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥರು ಹಾಗೂ ಪ್ರಧಾನ ವೈದ್ಯರಾದ ಡಾ. ರಾಜೇಶ್ ಬಾಯರಿ, “ಗೌರಿಯವರು ಭಾರತೀಯ ಸನಾತನ ಸಂಸ್ಕೃತಿಯನ್ನು ಅತ್ಯಂತ ನಿಷ್ಠೆಯಿಂದ ಪ್ರೀತಿಸುತ್ತಾರೆ. ಅವರು ಇಲ್ಲಿರುವಾಗ ಸದಾ ‘ಓಂ ನಮಃ ಶಿವಾಯ’ ಎಂಬ ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಿರುತ್ತಾರೆ. ಅವರ ಈ ಧರ್ಮನಿಷ್ಠೆ ಮತ್ತು ಭಕ್ತಿಭಾವ ನಿಜಕ್ಕೂ ಎಲ್ಲರಿಗೂ ಅಚ್ಚರಿ ಹಾಗೂ ಸಂತೋಷ ಉಂಟುಮಾಡುತ್ತದೆ” ಎಂದರು.

ನಮ್ಮವರೇ ಪಾಶ್ಚಿಮಾತ್ಯ ಸಂಸ್ಕೃತಿಯ ಬೆನ್ನುಬಿದ್ದು ತಮ್ಮ ಸಂಪ್ರದಾಯಗಳಿಂದ ದೂರ ಸರಿಯುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಸಹಸ್ರಾರು ಮೈಲುಗಳ ದೂರದಿಂದ ಬಂದ ವಿದೇಶಿ ಮಹಿಳೆಯೊಬ್ಬರು ಭಾರತದ ಮಣ್ಣಿನ ಸಂಸ್ಕೃತಿ, ಗೋಸೇವೆ ಮತ್ತು ಹಿಂದೂ ತತ್ತ್ವಶಾಸ್ತ್ರವನ್ನು ಇಷ್ಟೊಂದು ಗಾಢವಾಗಿ ಅಪ್ಪಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article