ಕೊಲ್ಲೂರು ದೇವಾಲಯದ ಹೆಸರಿನಲ್ಲಿ ನಕಲಿ ರೂಮ್ ಬುಕ್ಕಿಂಗ್ ದಂಧೆ: ಸೈಬರ್ ವಂಚಕರ ವಿರುದ್ಧ ಪೊಲೀಸರಿಗೆ ದೂರು
ಕುಂದಾಪುರ: ಕೊಲ್ಲೂರಿನ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಳದ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಗೆ ವಸತಿ ಕೊಠಡಿ ಕಾಯ್ದಿರಿಸುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಸೈಬರ್ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ದೇವಸ್ಥಾನದ ಅಧಿಕೃತ ವಸತಿ ಬುಕ್ಕಿಂಗ್ ವೆಬ್‌ಸೈಟ್ ಇರುವುದನ್ನು ದುರ್ಬಳಕೆ ಮಾಡಿಕೊಂಡ ಅಪರಿಚಿತರು, ‘ಹೋಟೆಲ್ ಅಕಾಮಡೇಶನ್' ಹೆಸರಿನಲ್ಲಿ jagadambikaguesthouse.xyz ಎಂಬ ಅನಧಿಕೃತ ನಕಲಿ ವೆಬ್‌ಸೈಟ್ ಸೃಷ್ಟಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ದೇವಳದ ಜಗದಾಂಬಿಕಾ ಅತಿಥಿ ಗೃಹದ ಕೊಠಡಿಗಳನ್ನು ಕಾಯ್ದಿರಿಸಿಕೊಡುವುದಾಗಿ ನಂಬಿಸಿ ಭಕ್ತರನ್ನು ವಂಚಿಸಲಾಗುತ್ತಿತ್ತು.
ನಕಲಿ ವೆಬ್‌ಸೈಟ್ ಮೂಲಕ ಕೊಠಡಿ ಬುಕ್ಕಿಂಗ್‌ಗಾಗಿ ಸಂಪರ್ಕಿಸುವ ಭಕ್ತರಿಗೆ ವಾಟ್ಸ್‌ಆಪ್‌ನಲ್ಲಿ ಫೋನ್ ಪೇ ಕ್ಯೂ ಆರ್ ಕೋಡ್ ಕಳುಹಿಸಿ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗುತ್ತಿತ್ತು. ಹಣ ಪಡೆದ ಬಳಿಕ ದೇವಳದ ಹೆಸರಿನಲ್ಲಿ ನಕಲಿ ರಶೀದಿಗಳನ್ನು ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೇವಳದ ವಸತಿ ಸೌಲಭ್ಯವನ್ನು ಬಳಸಿಕೊಳ್ಳಲು ಮುಂದಾಗಿದ್ದ ಹಲವು ಭಕ್ತರನ್ನು ಈ ರೀತಿಯಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ದೇವಸ್ಥಾನ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದ್ದು, ನಕಲಿ ವೆಬ್‌ಸೈಟ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
ದೇವಸ್ಥಾನದ ಅಧಿಕೃತ ವಸತಿ ಪೋರ್ಟಲ್ karnatakatemplesaccommodation.com ಆಗಿದ್ದು, ಅಧಿಕೃತ ಪೋರ್ಟಲ್‌ನಲ್ಲಿಯೇ ವಸತಿ ಕಾಯ್ದಿರಿಸುವಂತೆ ಭಕ್ತರಿಗೆ ಸೂಚಿಸಲಾಗಿದೆ. ಅಧಿಕೃತ ಪೋರ್ಟಲ್‌ನಲ್ಲಿ ಕೊಲ್ಲೂರಿನ ದೇವಳದ ಅತಿಥಿ ಗೃಹದ ಕೊಠಡಿಗಳ ಮಾಹಿತಿ ಲಭ್ಯವಿದೆ.
ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2026ರಂತೆ ಐಟಿ ಕಾಯ್ದೆಯ ಕಲಂ 66(c) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ವೆಬ್‌ಸೈಟ್ ಸೃಷ್ಟಿಸಿ ಹಣ ವಸೂಲಿ ಮಾಡಿರುವವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಸಿದ್ಧ ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ದಂಧೆ ನಡೆಸುತ್ತಿರುವುದು ಇದೇನೂ ಮೊದಲಲ್ಲ. ಈ ಹಿಂದೆಯೇ ವಿದೇಶಗಳಲ್ಲಿ ದೇವಿಯ ಹೆಸರಿನಲ್ಲಿ ಚಂಡಿಕಾ ಹೋಮಗಳನ್ನು ಬುಕ್ ಮಾಡಲಾಗುತ್ತಿದೆ ಎಂಬ ಒಂದು ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು. ನಂತರ ದೇವಿಯ ನಕಲಿ ಒಡವೆ ಸೃಷ್ಟಿಯ ಪ್ರಕರಣ ನಡೆದಿತ್ತು. ಆದರೆ, ಯಾವ ಪ್ರಕರಣದಲ್ಲೂ ಇದುವರೆಗೂ ಯಾರಿಗೂ ಶಿಕ್ಷೆಯಾದ ಬಗ್ಗೆ ವರದಿಯಾಗಿಲ್ಲ!