ಕಂಬಳಕ್ಕೆ 5 ಕೋಟಿ ಅನುದಾನ ಮೀಸಲಿಡಲು ಮನವಿ

ಕಂಬಳಕ್ಕೆ 5 ಕೋಟಿ ಅನುದಾನ ಮೀಸಲಿಡಲು ಮನವಿ

ಮಂಗಳೂರು: ಕರಾವಳಿಯ ಜಾನಪದ ಹಾಗೂ ಸಾಹಸ ಕ್ರೀಡೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕಂಬಳ ಕೂಟಗಳ ಆಯೋಜನೆಗೆ ಸರ್ಕಾರದಿಂದ ವಿಶೇಷ ಆರ್ಥಿಕ ನೆರವು ಒದಗಿಸಬೇಕು ಹಾಗೂ ಮುಂಬರುವ ಬಜೆಟ್‌ನಲ್ಲಿ ಒಟ್ಟು 5 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ರಾಜ್ಯ ಕಂಬಳ ಅಸೋಸಿಯೇಷನ್ (ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಿದೆ.

ಮಂಗಳೂರಿನಲ್ಲಿ ಸೆಪ್ಟಂಬರ್ 18ರಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ, ಸಂಘಟನೆಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿಗೆ ಈ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಸಂಪುಟದ ಪರಿಶೀಲನೆಗೆ ಅನುಮೋದನೆ ದೊರೆತಿದೆ.

ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಪ್ರತಿವರ್ಷ ನಡೆಯುವ ಕಂಬಳ ಕ್ರೀಡೆಯನ್ನು ದೇಶ - ವಿದೇಶಗಳ ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ಪ್ರತಿಯೊಂದು ಜೋಡುಕರೆ ಕಂಬಳ ಕೂಟವನ್ನು ಅಚ್ಚುಕಟ್ಟಾಗಿ ಸಂಘಟಿಸಲು ಕನಿಷ್ಠ 40 ರಿಂದ 50 ಲಕ್ಷ ರೂ. ವೆಚ್ಚವಾಗುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಕೋಣಗಳಿಗೆ, ಓಟಗಾರರಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡುವುದು ಸೇರಿದಂತೆ ಕ್ರೀಡೆಯನ್ನು ಉಳಿಸಿ ಬೆಳೆಸಲು ಸಂಘಟಕರು ದೊಡ್ಡ ಮೊತ್ತದ ಹಣ ವಿನಿಯೋಗಿಸುತ್ತಿದ್ದಾರೆ.

ಕಂಬಳವು ಕೇವಲ ಸಾಂಪ್ರದಾಯಿಕ ಕಲೆಯಾಗಿರದೇ ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆಗೆ ಭಾರಿ ಉತ್ತೇಜನ ನೀಡುವ ಕ್ರೀಡೆಯಾಗಿದೆ. ಆದ್ದರಿಂದ ಉಭಯ ಜಿಲ್ಲೆಗಳಲ್ಲಿ ನಡೆಯುವ 25 ಜೋಡುಕರೆ ಕಂಬಳಗಳಿಗೆ ಕ್ರೀಡಾ ಇಲಾಖೆಯಿಂದ 2.5 ಕೋಟಿ ರೂ. ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ 2.5 ಕೋಟಿ ರೂ.ಗಳಂತೆ ಒಟ್ಟು 5 ಕೋಟಿ ರೂ. ವಿಶೇಷ ಅನುದಾನವನ್ನು ಮೀಸಲಿಡಬೇಕು ಎಂದು ಪ್ರಸ್ತಾವನೆಯಲ್ಲಿ ಒತ್ತಾಯಿಸಲಾಗಿದೆ.

ಈ ಕುರಿತು ವಿವರ ನೀಡಿದ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು, "ಕರ್ನಾಟಕ ಸರ್ಕಾರ ಕ್ರೀಡಾ ಪ್ರಾಧಿಕಾರದಡಿ ಮಾನ್ಯತೆ ನೀಡಿ ರಾಜ್ಯ ಕಂಬಳ ಅಸೋಸಿಯೇಷನ್ ಅಸ್ತಿತ್ವಕ್ಕೆ ತಂದಿರುವುದು ಕಂಬಳದ ಗೌರವವನ್ನು ಹೆಚ್ಚಿಸಿದೆ. ಕಂಬಳ ಕರಾವಳಿಯ ಹೆಮ್ಮೆಯ ಸಾಂಸ್ಕೃತಿಕ ಜಾನಪದ ಕ್ರೀಡೆ. ಆದರೆ, ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಕಂಬಳ ಕೂಟಗಳನ್ನು ನಡೆಸುವುದು ಸಂಘಟಕರಿಗೆ ಸವಾಲಾಗಿ ಪರಿಣಮಿಸಿದೆ. ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವ ಈ ಮಹತ್ವದ ಸಂದರ್ಭದಲ್ಲಿ, ಸರ್ಕಾರವು ಕರಾವಳಿಯ ಜನರ ಭಾವನೆ ಮತ್ತು ಕ್ರೀಡಾ ಮಹತ್ವವನ್ನು ಪರಿಗಣಿಸಿ ೨೫ ಜೋಡುಕರೆ ಕಂಬಳಗಳಿಗೆ ೫ ಕೋಟಿ ರೂ. ಅನುದಾನವನ್ನು ಅಧಿಕೃತವಾಗಿ ಘೋಷಿಸಬೇಕು" ಎಂದು ಕೋರಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article