ಎಂಆರ್‌ಪಿಎಲ್ ಸ್ಫೋಟ: ಆಸ್ತಿ-ಪಾಸ್ತಿ ನಷ್ಟಕ್ಕೆ ಸೂಕ್ತ ಪರಿಹಾರ:  ಸಮಗ್ರ ತನಿಖೆಗೆ ಐವನ್ ಆಗ್ರಹ

ಎಂಆರ್‌ಪಿಎಲ್ ಸ್ಫೋಟ: ಆಸ್ತಿ-ಪಾಸ್ತಿ ನಷ್ಟಕ್ಕೆ ಸೂಕ್ತ ಪರಿಹಾರ: ಸಮಗ್ರ ತನಿಖೆಗೆ ಐವನ್ ಆಗ್ರಹ

ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಉಂಟಾಗಿರುವ ಆಸ್ತಿ-ಪಾಸ್ತಿ ನಷ್ಟ ಹಾಗೂ ಜೀವಹಾನಿಗೆ ಸಂಬಂಧಿಸಿದಂತೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಸ್ಫೋಟದ ಪರಿಣಾಮವಾಗಿ ಎಂಆರ್‌ಪಿಎಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪದ ರೀತಿಯ ಅನುಭವ ಉಂಟಾಗಿದ್ದು, ಹಲವು ಮನೆಗಳು, ಕಟ್ಟಡಗಳು ಹಾಗೂ ಚರ್ಚ್ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ. ಅಲ್ಲದೆ, ಘಟನೆಯಲ್ಲಿ ಒಬ್ಬರು ಮೃತಪಟ್ಟಿರುವ ಕುರಿತು ಮಾಹಿತಿ ದೊರೆತಿದ್ದು, ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಘಟನೆಯಿಂದ ಉಂಟಾಗಿರುವ ಹಾನಿಯ ಕುರಿತು ಕೂಡಲೇ ಸಮಗ್ರ ಸಮೀಕ್ಷೆ ನಡೆಸಬೇಕು. ಹಾನಿಗೊಳಗಾದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ-ಪಾಸ್ತಿಗಳ ನಷ್ಟವನ್ನು ಪರಿಶೀಲಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಐವನ್ ಡಿ’ಸೋಜಾ ಅವರು ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮನವಿ ಮಾಡಿದ್ದಾರೆ.

ಅಲ್ಲದೆ, ಸಂಭವಿಸಿರುವ ಜೀವಹಾನಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಬೇಕು. ಘಟನೆಯ ನಿಖರ ಕಾರಣಗಳನ್ನು ಪರಿಶೀಲಿಸಿ, ಎಂಆರ್‌ಪಿಎಲ್‌ನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಸುರಕ್ಷತಾ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸ್ಫೋಟದ ಪರಿಣಾಮವಾಗಿ ಹತ್ತಿರದ ಮನೆಗಳು, ಕಟ್ಟಡಗಳು ಹಾಗೂ ಚರ್ಚ್‌ಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ, ಎಲ್ಲಾ ಹಾನಿಗೊಳಗಾದ ಆಸ್ತಿಗಳ ಕುರಿತು ತಕ್ಷಣ ಸಮೀಕ್ಷೆ ನಡೆಸಿ ನಷ್ಟದ ಪ್ರಮಾಣವನ್ನು ನಿರ್ಧರಿಸಬೇಕು ಹಾಗೂ ಅರ್ಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವ ಮೂಲಕ, ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಶಾಶ್ವತ ಹಾಗೂ ಪರಿಣಾಮಕಾರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಐವನ್ ಡಿ’ಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article