ಅವಧಿ ಮೀರಿದ ಮಾತ್ರೆ ನೀಡಿಕೆ ಆರೋಪ: ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ: ಡಾ.ಯದುರಾಜ್ ಸ್ಪಷ್ಟನೆ
ಪುತ್ತೂರು: ಮಧುಮೇಹ ರೋಗಿಯೊಬ್ಬರಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮುಗಿದ ಮಾತ್ರೆಗಳನ್ನು ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಈ ಆಸ್ಪತ್ರೆಯ ಫಾರ್ಮಾಸಿಸ್ಟ್ ಅಧಿಕಾರಿಯನ್ನು ದಾಖಲೆ ಸಹಿತ ವಿಚಾರಣೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ವರದಿ ನೀಡಲಾಗುವುದು ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ಡಿ.ಕೆ. ಅವರು ತಿಳಿಸಿದ್ದಾರೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯ ಔಷಧಾಲಯದಲ್ಲಿ ಶುಗರ್ ಪೇಷಂಟ್ ಒಬ್ಬರಿಗೆ ಸೆಪ್ಟಂಬರ್ ತಿಂಗಳ ೨ನೇ ವಾರದಲ್ಲಿ ನೀಡಲಾದ ಮಾತ್ರೆಯ ಅವಧಿ ಮೀರಿತ್ತು. ಆದರೆ ರೋಗಿ ಅದನ್ನು ಗಮನಿಸದೆ ಮಾತ್ರೆ ಸೇವಿಸಿದ್ದಾರೆ. ಒಂದಷ್ಟು ಕಾಲದ ಬಳಿಕ ರೋಗಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದು ಮಾತ್ರೆಗಳನ್ನು ಪರಿಶೀಲಿಸಿದಾಗ ಅದರ ಅವಧಿ ಮುಗಿದಿರುವುದು ಕಂಡುಬಂದಿದೆ ಎಂಬ ಆರೋಪ ವ್ಯಕ್ತವಾಗಿತ್ತು.
ಈ ಕುರಿತು ಆಡಳಿತ ವೈದ್ಯಾಧಿಕಾರಿಗಳು ವಿವರಣೆ ನೀಡಿ, ಈ ಆರೋಪವು ನಮ್ಮ ಗಮನಕ್ಕೆ ಬಂದಾಗ ಫಾರ್ಮಸಿಸ್ಟ್ ಅಧಿಕಾರಿಯವರನ್ನು ವಿಚಾರಿಸಲಾಗಿದೆ. ಆದರೆ ಅಲ್ಲಿ ಯಾವುದೇ ರೀತಿಯ ಹಳೆ ಸ್ಟಾಕ್ ಇಲ್ಲ ಎಂಬ ಮಾಹಿತಿ ನೀಡಿದ್ದಾರೆ. ಅವಧಿ ಮುಗಿದ ಮಾತ್ರೆಗಳ ಸ್ಟಾಕ್ ತೆಗೆಯಲಾಗಿದೆ ಎಂದಿದ್ದಾರೆ. ಜತೆಗೆ ಮಾತ್ರೆಗಳ ಕುರಿತು ಆರೋಪಿಸಿರುವ ರೋಗಿಯ ಆರೋಗ್ಯವನ್ನು ಪರೀಕ್ಷಿಸಿದಾಗ ಆರೋಗ್ಯದಲ್ಲಿ ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ತಿಳಿಸಿದರು.
ನಾವು ಪ್ರತಿ ತಿಂಗಳು ಔಷಧಗಳನ್ನು ಪರಿಶೀಲಿಸಿ, ಅವಧಿ ಮುಗಿದ ಮಾತ್ರೆಗಳನ್ನು ಬಯೋ ಮೆಡಿಕಲ್ ವೇಸ್ಟ್ ಕಂಪೆನಿಯವರು ತೆಗೆದುಕೊಂಡು ಹೋಗುತ್ತಾರೆ. ಮಾತ್ರೆಗಳ ಅವಧಿ ಮುಗಿಯುವ ಹಂತದಲ್ಲಿದ್ದರೆ ಅಂತಹ ಮಾತ್ರೆಗಳನ್ನು ರೋಗಿಗಳಿಗೆ ಕೊಡುವುದಿಲ್ಲ, ಒಂದು ವೇಳೆ ಮುಗಿಯುವುದಿದ್ದರೂ, ಅದನ್ನು ಕೂಡ ತಿಳಿಸುತ್ತೇವೆ. ಪ್ರಸ್ತುತ ಆರೋಪದ ಕುರಿತು ಸೂಕ್ತ ವಿಚಾರಣೆ ನಡೆಸಿ ಡಿಎಚ್‌ಒ ಅವರಿಗೆ ವರದಿ ಸಲ್ಲುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.