ಬೀದರ್‌ನ ಶಾಹೀನ್ ವಿದ್ಯಾ ಸಂಸ್ಥೆ ವಿರುದ್ಧ ಪೋಷಕರ ಆರೋಪ: ನಿರ್ಲಕ್ಷ್ಯದಿಂದ ಮಂಗಳೂರಿನ ವಿದ್ಯಾರ್ಥಿನಿ ಅಸ್ವಸ್ಥ
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯ ತಂದೆ ಅಶ್ಪಾಕ್ ಶೇಕ್, ಹಾಸ್ಟೆಲ್‌ನಲ್ಲಿ ತೀವ್ರ ಅನಾರೋಗ್ಯ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ತಮ್ಮ ಪುತ್ರಿಗೆ ಅಲ್ಲಿನ ನರ್ಸಿಂಗ್ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಯಿತು. ಆದರೆ ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಾಗ ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಅಥವಾ ಆಸ್ಪತ್ರೆ ಸೇರಿಸಿಲ್ಲ ಎಂದು ಆರೋಪಿಸಿದರು.
ಮಗಳು ಅನಾರೋಗ್ಯ ಪೀಡಿತರಾಗಿದ್ದಾರೆ ಎನ್ನುವ ಮಾಹಿತಿಯನ್ನು ಪಡೆದುಕೊಂಡು ಅಲ್ಲಿಂದ ಮಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿದಾಗ ಟೈಫಾಯ್ಡ್ ಜ್ವರವಿರುವುದು ಪತ್ತೆಯಾಯಿತು. ಆರಂಭದಲ್ಲಿ ಸೂಕ್ತ ಚಿಕಿತ್ಸೆ ನೀಡದ ಪರಿಣಾಮ ದೇಹದಲ್ಲಿ ಕಿಡ್ನಿ, ಮೆದುಳು ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವೈದ್ಯರು ತಿಳಿಸಿದರು. ಈಗಾಗಲೇ 35 ಲಕ್ಷ ರೂ.ಗಳನ್ನು ಮಗಳ ಆರೋಗ್ಯಕ್ಕಾಗಿ ಖರ್ಚು ಮಾಡಲಾಗಿದೆ. ಆದರೆ ಸಂಸ್ಥೆಯವರು ಮಗಳನ್ನು ಕರೆದುಕೊಂಡು ಬಂದ ಬಳಿಕ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಬೀದರ್‌ನ ಹಾಸ್ಟೆಲ್‌ನಲ್ಲಿ ಅನಾರೋಗ್ಯ ಪೀಡಿತರಾದ ಬಳಿಕ ಅಲ್ಲಿ ನೀಡಿದ ಎಲ್ಲ ಚಿಕಿತ್ಸೆಯ ವಿವರ, ವೈದ್ಯಕೀಯ ದಾಖಲೆ, ಸಿಸಿಟಿವಿಯ ಮಾಹಿತಿ ಎಲ್ಲ ವಿವರಗಳನ್ನು ಒದಗಿಸಬೇಕು. ತನಿಖೆಯ ವರದಿ ಮತ್ತು ಅನ್ವಯಿಸುವ ಕಾನೂನುಗಳ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಈಗಾಗಲೇ ಅಲ್ಲಿ ಬಹಳಷ್ಟು ಮಕ್ಕಳು ಜಾಂಡೀಸ್, ಟೈಫಾಯ್ಡ್ ಸೇರಿದಂತೆ ಇತರ ಕಾಯಿಲೆಗಳಿಂದ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಅವರ ಆರೋಗ್ಯ ಪರಿಶೀಲನೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಸಿಎಂ, ಶಿಕ್ಷಣ ಮಂತ್ರಿಗೂ ಮನವಿ..
ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಬಳಿಗೆ ಈ ವಿಚಾರವನ್ನು ತಿಳಿಸಿದ್ದೇವೆ. ಆದರೆ ಅವರು ಇದಕ್ಕೆ ಪೂರಕವಾಗಿ ಸ್ಪಂದಿಸಿಲ್ಲ. ಸೆ.15ರಂದು ಅವರ ವಾಟ್ಸಾಪ್‌ಗೂ ಮಾಹಿತಿ ಕೊಟ್ಟಿದ್ದೇವೆ. ನಮಗೆ ನೆರವು ಸಿಗುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವರಿಗೂ ಮನವಿ ನೀಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
‘ಶಾಹೀನ್ ಸಂಸ್ಥೆಯಲ್ಲಿ ಕಲಿಯುತ್ತಿರುವ ನನ್ನ ಮಗಳೂ ಅನಾರೋಗ್ಯಕ್ಕೆ ತುತ್ತಾಗಿ ಈಗಲೂ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ನಿನ್ನೆಯಿಂದ ಆಕೆ ಕಣ್ಣು ತೆರೆದಿದ್ದಾಳೆ. ಅಲ್ಲಿ ಗುಣಮಟ್ಟದ ಶಿಕ್ಷಣ ಸಿಗುವ ನಿರೀಕ್ಷೆಯೊಂದಿಗೆ ಮಗಳನ್ನು ಆ ಸಂಸ್ಥೆಗೆ ಸೇರಿಸಲಾಗಿದೆ. ಇದೀಗ ಅಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಈ ರೀತಿ ಅನಾರೋಗ್ಯಕ್ಕೆ ತುತ್ತಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಎಂದು ದಾವಣಗೆರೆ ಮೂಲದ ವಿದ್ಯಾರ್ಥಿನಿಯೊಬ್ಬರ ತಂದೆ ಅನ್ಸಾರ್ ಅಲಿ ಆಗ್ರಹಿಸಿದರು.
ವಿದ್ಯಾರ್ಥಿನಿಯ ಕುಟುಂಬಸ್ಥರಾದ ಸೈಯದ್ ಶಾರೀಕ್, ಶೌಕತ್ ಉಪಸ್ಥಿತರಿದ್ದರು.