ಸೌಜನ್ಯ ಪ್ರಕರಣ: ಎಸ್‌ಐಟಿ ಬಗ್ಗೆ ಸೌಜನ್ಯ ತಾಯಿ ಅಸಮಾಧಾನ
ಮಂಗಳೂರು: ಉಜಿರೆ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯಕ್ಕೆ ಸೌಜನ್ಯಳ ತಾಯಿ ಕುಸುಮಾವತಿ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ದ ಬಗ್ಗೆ ತಮಗೆ ಅಸಮಾಧಾನವಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ವಾಟ್ಸ್‌ಆಪ್ ನಲ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕುಸುಮಾವತಿ, “ನನ್ನ ಮಗಳು, ಧರ್ಮಸ್ಥಳ ಸೌಜನ್ಯಳಿಗಾದ ದುರಂತದ ಮರುತನಿಖೆಗೆ ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯಕ್ಕೆ ನಾವು ಎಂದಿಗೂ ಆಭಾರಿಯಾಗಿರುತ್ತೇವೆ. ಮರುತನಿಖೆಗಾಗಿ ರಾಜ್ಯ ಸರ್ಕಾರವು ರಚಿಸಿರುವ ವಿಶೇಷ ತನಿಖಾ ದಳದ ಬಗ್ಗೆ ನಮಗೆ ಅಸಮಾಧಾನವಿದೆ” ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ SIT ಕುರಿತು ಸೌಜನ್ಯ ಕುಟುಂಬದ ಮೊದಲ ಅಧಿಕೃತ ಹೇಳಿಕೆ ಇದಾಗಿದೆ.
ತನಿಖಾ ತಂಡದ ಕುರಿತು ಕುಸುಮಾವತಿಯವರಿಗೆ ಯಾವ ಕಾರಣಕ್ಕೆ ಅಸಮಾಧಾನ ಇದೆ ಎಂಬುದನ್ನು ಅವರು ತಿಳಿಸಿಲ್ಲವಾದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಅಧಿಕಾರಿಗಳನ್ನು ತಂಡದಲ್ಲಿ ನೇಮಿಸಿರುವುದೇ ಅವರ ಆಕ್ಷೇಪಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಪಕ್ಷಪಾತವಿಲ್ಲದೆ ನ್ಯಾಯಯುತ ತನಿಖೆ ನಡೆಯಬೇಕಾದರೆ, ಈ ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯ ನಂಟು ಇರುವ ಅಧಿಕಾರಿಗಳನ್ನು ಎಸ್‌ಐಟಿಯಿಂದ ಕೈಬಿಡಬೇಕು ಎಂಬ ಒತ್ತಾಯವೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.