ರಾಷ್ಟ್ರಪ್ರಶಸ್ತಿ ವಿಜೇತ ತುಳುನಾಡಿನ ಕಲಾವಿದರು ತಾಯ್ನಾಡಿಗೆ: ವಿಮಾನ ನಿಲ್ದಾಣದಲ್ಲಿ ಸ್ವಾಗತ

ರಾಷ್ಟ್ರಪ್ರಶಸ್ತಿ ವಿಜೇತ ತುಳುನಾಡಿನ ಕಲಾವಿದರು ತಾಯ್ನಾಡಿಗೆ: ವಿಮಾನ ನಿಲ್ದಾಣದಲ್ಲಿ ಸ್ವಾಗತ


ಮಂಗಳೂರು: 72ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ರಂಗಭೂಮಿ ಕಲಾವಿದೆ ರೂಪಶ್ರೀ ವರ್ಕಾಡಿ, ಬಾಲನಟ ಆತೀಶ್ ಎಸ್. ಶೆಟ್ಟಿ, ಸುಮಂತ್ ಭಟ್ ಹಾಗೂ ಸಿನಿಮಾಧಾರಿತ ಉತ್ತಮ ಪುಸ್ತಕ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿರುವ ಕುಂದಾಪುರ ಮೂಲದ ಡಾ. ಪ್ರದೀಪ್ ಕೆಂಚನೂರು ಅವರು ಬುಧವಾರ ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರುಗಳನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯರು, ಹಿತೈಷಿಗಳು ಸ್ವಾಗತ ಕೋರಿದರು.


‘ಮಿಥ್ಯಾ’ ಕನ್ನಡ ಸಿನಿಮಾ ಮೂರು ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದ್ದು, ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಚಿತ್ರದ ಬರಹಗಾರ ಹಾಗೂ ನಿರ್ದೇಶಕ ಸುಮಂತ್ ಭಟ್, ಬಾಲನಟ ಆತೀಶ್ ಎಸ್. ಶೆಟ್ಟಿ, ಪೋಷಕ ನಟಿ ರೂಪಶ್ರೀ ವರ್ಕಾಡಿ ಮಂಗಳವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು. 

ಈ ಕುರಿತು ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡ ರೂಪಶ್ರೀ ವರ್ಕಾಡಿ ಅವರು, ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿಭಾಗದಲ್ಲಿ ತುಳುನಾಡಿನ ಕಲಾವಿದರಿಗೆ ಪ್ರಶಸ್ತಿ ಲಭಿಸಿರುವುದು ತುಳುಭಾಷೆಗೆ ದಕ್ಕಿದ ಬಹುದೊಡ್ಡ ಸ್ಥಾನಮಾನವಾಗಿದೆ. ಸಿನಿಮಾದಲ್ಲಿ ನಟಿಸುವಾಗ ಇಷ್ಟು ದೊಡ್ಡ ಪ್ರಶಸ್ತಿ ಸಿಗುವ ನಿರೀಕ್ಷೆ ಖಂಡಿತಾ ಇರಲಿಲ್ಲ. ಆದರೆ ತುಳುನಾಡಿನ ಸರ್ವರ ಪ್ರೀತಿ, ಹೆತ್ತವರು ಮತ್ತು ದೈವದೇವರ ಆಶೀರ್ವಾದದಿಂದ ಈ ಮನ್ನಣೆ ಸಿಕ್ಕಿದೆ. ಇದು ಜೀವನದಲ್ಲಿ ಅತ್ಯಂತ ಸಂತಸದ ದಿನ ಮತ್ತು ಎಂದಿಗೂ ಮರೆಯಲಾಗದ್ದು. ಮುಂದೆ ಒಬ್ಬ ನಟಿಯಾಗಿ ಸಾಮಾಜಿಕ ಕಾಳಜಿಯ ಸಿನಿಮಾಗಳಲ್ಲಿ ಹೆಚ್ಚೆಚ್ಚು ನಟಿಸುತ್ತೇನೆ. ಇಂತಹ ಅವಕಾಶ ಕಲ್ಪಿಸಿದ್ದಕ್ಕೆ ನಿರ್ದೇಶಕ, ನಿರ್ಮಾಪಕರು ಸಹಿತ ಎಲ್ಲರಿಗೂ ಧನ್ಯವಾದಗಳು ಎಂದರು. 

ನಿರ್ದೇಶಕ ಸುಮಂತ್ ಭಟ್ ಮಾತನಾಡಿ, ಹಿಂದೆ ನಮ್ಮ ಸಂತೋಷಕ್ಕಾಗಿ ಸಿನಿಮಾ ಮಾಡುತ್ತಿದ್ದೆವು. ಆದರೆ ರಾಷ್ಟ್ರಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. ನಮ್ಮ ಸಿನಿಮಾವನ್ನು ಜನರು ನೋಡುತ್ತಾರೆ ಇಷ್ಟಪಡುತ್ತಾರೆ ಎಂದರೆ ಇನ್ನಷ್ಟು ಗಮನಕೊಟ್ಟು ಸಿನಿಮಾ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದು ಹೇಳಿದರು.

ಬಾಲನಟ ಆತೀಶ್ ಎಸ್. ಶೆಟ್ಟಿ ಮಾತನಾಡಿ, ಪ್ರಶಸ್ತಿಯನ್ನು ನಾನು ನಿರೀಕ್ಷಿಸಿರಲಿಲ್ಲ, ಮಿಥ್ಯಾ ಸಿನಿಮಾದಲ್ಲಿ ಅವಕಾಶ ನೀಡಿರುವ ನಿರ್ದೇಶಕ ಹಾಗೂ ಸಹಕಲಾವಿದರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಹೆತ್ತವರು ಮತ್ತು ಕಾಲೇಜಿನ ಆಡಳಿತ ಮಂಡಳಿಯ ಪ್ರೋತ್ಸಾಹ ದೊಡ್ಡಮಟ್ಟದಲ್ಲಿದ್ದು, ಅವರಿಗೆ ನಾನು ಸದಾ ಚಿರಋಣಿಯಾಗಿದ್ದೇನೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article