ರಾಹುಲ್ ಗಾಂಧಿ ಆರೋಪ ಪ್ರಜಾಪ್ರಭುತ್ವಕ್ಕೆ ಕಂಟಕ: ಸಂಸದ ಬ್ರಿಜೇಶ್ ಚೌಟ
ಮಂಗಳೂರು: ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿರುವ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೇಲೆ ನಿರಂತರ ದಾಳಿ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಚುನಾವಣಾ ಆಯೋಗ ಸೇರಿದಂತೆ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ತೇಜೋವಧೆ ಮಾಡುವುದನ್ನೇ ತನ್ನ ಮುಖ್ಯ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ಖೇದಕರ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಆಯೋಗ ನೀಡಿರುವ ಇತ್ತೀಚಿನ ಸ್ಪಷ್ಟನೆಯು ರಾಹುಲ್ ಗಾಂಧಿಯವರ ಈ ಬೇಜವಾಬ್ದಾರಿ ಧೋರಣೆಯನ್ನು ಮತ್ತೊಮ್ಮೆ ದೇಶದ ಮುಂದೆ ಬೆತ್ತಲೆಗೊಳಿಸಿದೆ. ಜನಾದೇಶ ತಮ್ಮ ವಿರುದ್ಧ ಬಂದಾಗಲೆಲ್ಲಾ ರಾಹುಲ್ ಗಾಂಧಿ ಸಾಂವಿಧಾನಿಕ ಸಂಸ್ಥೆಗಳನ್ನು ಟಾರ್ಗೆಟ್ ಮಾಡುವ ಛಾಳಿ ಮುಂದುವರಿಸುತ್ತಾರೆ. ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸುವುದು, ಚುನಾವಣಾ ಪ್ರಕ್ರಿಯೆಯನ್ನು ಅನುಮಾನಿಸುವುದು, ಇವಿಎಂ ಮೇಲೆ ಗೂಬೆ ಕೂರಿಸುವುದು ಅವರ ರಾಜಕೀಯ ತಂತ್ರಗಾರಿಯಾಗಿಬಿಟ್ಟಿದೆ. ಪ್ರತಿ ಬಾರಿಯೂ ಮತದಾರದ ತೀರ್ಪನ್ನು ಸ್ವೀಕರಿಸುವ ಸೌಜನ್ಯ ತೋರುವ ಬದಲು, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬೊಟ್ಟು ಮಾಡಿ, ದೇಶದಲ್ಲಿ ಗೊಂದಲದ ವಾತಾವರಣ ಹುಟ್ಟುಹಾಕಲು ಪ್ರಯತ್ನಿಸುವುದೇ ರಾಹುಲ್ ಗಾಂಧಿ ಕಾಯಕ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ ಅಥವಾ ಕರ್ನಾಟಕದಲ್ಲಿ ಗೆದ್ದಾಗ ಚುನಾವಣಾ ಆಯೋಗ ಅಥವಾ ಇವಿಎಂ ಸರಿಯಾಗಿರುತ್ತದೆ. ಆದರೆ ಉಳಿದಡೆ ಸೋತಾಗ ಸಾಂವಿಧಾನಿಕ ಸಂಸ್ಥೆಗಳನ್ನು ದೂಷಿಸುತ್ತವೆ. ಸಾಲು ಸಾಲು ಚುನಾವಣಾ ಸೋಲುಗಳನ್ನು ಜೀರ್ಣಿಸಿಕೊಳ್ಳಲಾಗದೇ ಚುನಾವಣಾ ಆಯೋಗ ತೇಜೋವಧೆ ಮಾಡುವುದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ದುರಂತ. ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸುವ ಮೂಲಕ ಸಾಂವಿಧಾನಿಕ ಸಂಸ್ಥೆಗಳನ್ನು ಹತ್ತಿಕ್ಕುವ ಪಿತೂರಿ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.