ಎಐ ಕಲಿಕೆಯ ವೇದಿಕೆಯೂ ಆಗಲಿ: ಡಾ. ವೀರಭದ್ರಪ್ಪ

ಎಐ ಕಲಿಕೆಯ ವೇದಿಕೆಯೂ ಆಗಲಿ: ಡಾ. ವೀರಭದ್ರಪ್ಪ


ಮಂಗಳೂರು: ಕೃತಕ ಬುದ್ಧಿಮತ್ತೆ ಕೇವಲ ಮಾತುಕತೆಗೆ ಮಾತ್ರವೇ ಸೀಮಿತವಾಗದೇ ಕಲಿಕೆಯ ವೇದಿಕೆಯಾಗಿ ಬಳಕೆಯಾಗಲಿ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ ಹೇಳಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ವಿಶ್ವ ಪ್ರವಾಸೋದ್ಯಮದ ದಿನದ ಅಂಗವಾಗಿ ಬಿಬಿಎ (ಪ್ರಯಾಣ ಮತ್ತು ಪ್ರವಾಸೋದ್ಯಮ) ಮತ್ತು ಆಂತರಿಕ ಗುಣಮಟ್ಟ ಖಾತ್ರಿ ಕೋಶದ ವತಿಯಿಂದ ಜಾಗತಿಕ ಪ್ರವಾಸೋದ್ಯಮದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಾಗತಿಕವಾಗಿ ಕೃತಕ ಬುದ್ಧಿಮತ್ತೆ ಜನಪ್ರಿಯಗೊಳ್ಳುತ್ತಿರುವ ಸಂದರ್ಭದಲ್ಲೇ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಎಐ ತನ್ನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಚಾಟ್ಬೋಟ್, ವರ್ಚುಯಲ್ ಸಹಾಯಕ, ಮುನ್ಸೂಚಕ ವಿಶ್ಲೇಷಣೆ, ವರ್ಧಿತ ವಾಸ್ತವತೆ ಮತ್ತು ವರ್ಚುಯಲ್ ವಾಸ್ತವತೆಯಂತಹ ಡಿಜಿಟಲ್ ಸಾಧನಗಳು ಇಂದು ಪ್ರವಾಸೋದ್ಯಮ ಕ್ಷೇತ್ರದ ಅನುಭವಗಳನ್ನು ಸಾಕಷ್ಟು ರೂಪಾಂತರಗೊಳಿಸಿವೆ. ಈ ಕ್ಷೇತ್ರದಲ್ಲಿ ಸಕಾರಾತ್ಮಕ ಬೆಳವಣಿಗೆ ಜೊತೆಗೆ ಖಾಸಗಿತನ ಕಾಪಾಡುವುದು, ಉದ್ಯೋಗ ಕಡಿತ, ಮಾನವೀಯತೆಯ ಸ್ಪರ್ಶದ ಕೊರತೆ, ದತ್ತಾಂಶ ಗೌಪ್ಯತೆಯಂತಹ ಸೂಕ್ಷ್ಮ ವಿಷಯಗಳನ್ನು ಸಂರಕ್ಷಣೆ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ರಾಮಕೃಷ್ಣ ಬಿ.ಎಂ., ಪ್ರವಾಸೋದ್ಯಮ ದೇಶದ ಆರ್ಥಿಕತೆಗೆ ಬಲ ನೀಡುತ್ತದೆ. ಪ್ರವಾಸೋದ್ಯಮ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡುವುದಷ್ಟೇ ಅಲ್ಲ; ಬದಲಾಗಿ ಜ್ಞಾನದ ಬೆಳವಣಿಗೆ, ಸಾಂಪ್ರದಾಯಿಕ ಸಂಸ್ಕೃತಿಗಳ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೇ, ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಭಾರತದಂತಹ ದೇಶದಲ್ಲಿ ಸಾಕಷ್ಟು ಪ್ರವಾಸೋದ್ಯಮದ ಆಕರ್ಷಿಣೀಯ ಸ್ಥಳಗಳು ದೂರದ ಪ್ರದೇಶಗಳಿಂದ ಜನರನ್ನು ಆಕರ್ಷಿಸುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಬಿಎ (ಪ್ರಯಾಣ ಮತ್ತು ಪ್ರವಾಸೋದ್ಯಮ) ವಿಭಾಗದ ಮುಖ್ಯಸ್ಥ ಪ್ರೊ. ಜಗದೀಶ್, ಐಕ್ಯುಎಸಿ ಸಂಯೋಜಕ ಡಾ. ಸಿದ್ದರಾಜು ಎಂ.ಎನ್., ಪ್ರವಾಸೋದ್ಯಮ ವಿಭಾಗದ ಡಾ. ಶ್ರೀರಾಜ್, ಭರತ್ ಕುಮಾರ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಯತೀಶ್ ಕುಮಾರ್ ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article