ಬಡ ಕುಟುಂಬದ ನೋವಿಗೆ ಸ್ಪಂದಿಸಿದ ಮಾನವೀಯ ಹೃದಯಗಳು ನಿರ್ಗತಿಕಳ ಅಂತ್ಯಸಂಸ್ಕಾರಕ್ಕೆ ನೆರವಾದ ಸ್ಥಳೀಯರು

ಬಡ ಕುಟುಂಬದ ನೋವಿಗೆ ಸ್ಪಂದಿಸಿದ ಮಾನವೀಯ ಹೃದಯಗಳು ನಿರ್ಗತಿಕಳ ಅಂತ್ಯಸಂಸ್ಕಾರಕ್ಕೆ ನೆರವಾದ ಸ್ಥಳೀಯರು


ಬಂಟ್ವಾಳ: ಬದುಕಿನುದ್ದಕ್ಕೂ ಬಡತನ, ಅನಾರೋಗ್ಯದ ನೋವಿನ ನಡುವೆ ಜೀವನ ಸಾಗಿಸಿದ್ದ ಪಂಜೋಡಿ ನಿವಾಸಿ ನೀಲಮ್ಮ ಅವರ ಅಂತಿಮ ಕ್ಷಣವೂ ಸಂಕಷ್ಟದಿಂದ ಕೂಡಿತ್ತು.

ತೀರಾ ಬಡ ಕುಟುಂಬದವರಾಗಿದ್ದ ಅವರಿಗೆ ಅಂತ್ಯಸಂಸ್ಕಾರ ನಡೆಸಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಕಷ್ಟದ ಈ ಸಂದರ್ಭದಲ್ಲಿ ಸ್ಥಳೀಯರು ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನೀಲಮ್ಮ ಅವರು ಹಾಸಿಗೆ ಹಿಡಿದಿದ್ದರು. ಓರ್ವ ಪುತ್ರಿಯೊಂದಿಗೆ ವಾಸಿಸುತ್ತಿದ್ದ ಅವರು ಈಚೆಗೆ ನಿಧನರಾದ ತಾಯಿಯ ಅಂತಿಮ ವಿಧಿವಿಧಾನಗಳನ್ನು ನಡೆಸುವುದಕ್ಕೂ ಅಗತ್ಯ ವ್ಯವಸ್ಥೆ ಇಲ್ಲದ ಪರಿಸ್ಥಿತಿ ಪುತ್ರಿಗೆ ಎದುರಾಗಿತ್ತು.

ಈ ಬಗ್ಗೆ ಮಾಹಿತಿ ದೊರೆತ ಜಿ.ಪಂ.ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ, ಇರ್ವತ್ತೂರು ಪಂಚಾಯಿತ್ ನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲು ಮುಂದಾದರು.

ಅವರಿಗೆ ಶಂಕರ್ ಶೆಟ್ಟಿ ಬೆದ್ರಮಾರ್, ರವಿಶಂಕರ್ ಹೊಳ್ಳ ಮಣ್ಣೂರು, ಗುರುಪ್ರಸಾದ್ ಶೆಟ್ಟಿ ಇರ್ವತ್ತೂರುಪದವು, ಆನಂದ ಬಲ್ಲೆರೊಟ್ಟು, ಸಂಜೀವ ಪಂಜೋಡಿ, ಹರೀಶ್ ಪೂಜಾರಿ ಮಣ್ಣೂರು, ಶೇಖರ್ ಸಾಲ್ಯಾನ್ ನೇರಳಕಟ್ಟೆ ಹಾಗೂ ಹೈದರ್ ಪಂಜೋಡಿ ಅವರು ಸಾಥ್ ನೀಡಿದರು.

ಅಂತ್ಯಸಂಸ್ಕಾರಕ್ಕೆ ಅಗತ್ಯವಾದ ಅಡಿಕೆ ಗಾರ್ಬಲ್ ವ್ಯವಸ್ಥೆಯನ್ನು ಪುಂಜಾಲಕಟ್ಟೆಯ ನಝೀರ್ ಸಾಬ್ ಅವರು ಒದಗಿಸಿದರು.

ಕೊನೆಯ ಪಯಣಕ್ಕೆ ಗೌರವ:

ತಾಯಿ ಬದುಕಿದ್ದಾಗ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನೆರವು ದೊರಕದಿದ್ದರೂ, ಕೊನೆಯ ಪಯಣವಾದರೂ ಗೌರವಯುತವಾಗಿ ನಡೆಯಬೇಕೆಂಬ ಮಾನವೀಯ ನೆಲೆಯಲ್ಲಿ   ಜಾತಿ, ಧರ್ಮ,  ಆರ್ಥಿಕ ಭೇದವಿಲ್ಲದೆ ಸಂಕಷ್ಟದಲ್ಲಿದ್ದ ಕುಟುಂಬದೊಂದಿಗೆ ನಿಂತು ಅಂತಿಮ ವಿಧಿವಿಧಾನಕ್ಕೆ ನೆರವಾದ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ನೀಲಮ್ಮ ಅವರ ಅಂತಿಮ ಸಂಸ್ಕಾರಕ್ಕೆ ಸಹಕರಿಸಿದ ಪ್ರತಿಯೊಬ್ಬರ ಸೇವಾಭಾವನೆ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವಂತಾಗಿದೆ. ಅಂತ್ಯಸಂಸ್ಕಾರಕ್ಕೆ ನೆರವಾದ ಎಲ್ಲರಿಗೂ ಕುಟುಂಬದ ಪರವಾಗಿ ನೀಲಮ್ಮಳ ಪುತ್ರಿ ಕೃತಜ್ಞತೆ ಸಲ್ಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article