ಕೃತಕ ಬುದ್ಧಿಮತ್ತೆಯಿಂದ‌ ಅಪಾಯ ಪ್ರೊ. ವಿವೇಕ ರೈ

ಕೃತಕ ಬುದ್ಧಿಮತ್ತೆಯಿಂದ‌ ಅಪಾಯ ಪ್ರೊ. ವಿವೇಕ ರೈ


ಕೊಣಾಜೆ: ಜನ್ನನ ಯಶೋಧರ ಚರಿತೆಯಲ್ಲಿ ಬರುವ ಕೃತಕವಾಗಿ 'ಮಾಡಿದ‌ ಕೋಳಿ'ಯಿಂದಾಗಿ ಯಶೋಧರ ಜನ್ಮಾಂತರದಲ್ಲಿ 'ಗೂಡಿನ ಕೋಳಿ'ಯಾಗಿ ಸಂಕಟ ಪಡುವ ಪ್ರಸಂಗ ಬರುತ್ತದೆ. ಯಾವತ್ತೂ ಕೃತಕ ಬುದ್ಧಿಯ ಪ್ರತಿಫಲ ಸಂಕಟವೇ ಆಗಿದೆ. ಆದ್ದರಿಂದ.  ಕೃತಕ ಬುದ್ಧಿಮತ್ತೆಯನ್ನು ಎಚ್ಚರದಿಂದ ಬಳಸಿ ಎಂದು ವಿದ್ವಾಂಸರಾದ ಪ್ರೊ ಬಿ ಎ ವಿವೇಕ ರೈ ಹೇಳಿದರು.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಮತ್ತು ಮೈಸೂರು ವಿಭಾಗ ಹಾಗೂ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿವಿ ಇದರ ಆಶ್ರಯದಲ್ಲಿ ಮಂಗಳೂರು  ವಿವಿ ಎಸ್ ವಿಪಿ ಕನ್ನಡ ಅಧ್ಯಯನ  ಸಂಸ್ಥೆಯ ಪ್ರೊ.ಬಿ.ಎ.ವಿವೇಕ ರೈ ವಿಚಾರ ವೇದಿಕೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ  "ಹಳಗನ್ನಡ ಓದು ಮತ್ತು ವ್ಯಾಖ್ಯಾನ "ರಾಷ್ಟ್ರೀಯ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. 

ಓದುವಿಕೆ ಬಹಳ ಸಂಕೀರ್ಣವಾದ ಹಾಗೂ ಸಾಂಸ್ಕೃತಿಕವಾದ ವಿಮರ್ಶೆಯ ಪರಿಕಲ್ಪನೆಯಾಗಿದೆ. ಸಮಾಜ ಮತ್ತು ಓದುವಿಕೆಗೆ ಆಳವಾದ ಸಂಬಂಧವಿದೆ. ಹಳಕನ್ನಡವು ಕನ್ನಡದ ಭಾಷೆಯನ್ನು ಕಟ್ಡಿಕೊಡುತ್ತದೆ. ಆದ್ದರಿಂದ ಹಳ ಕನ್ನಡದ ಮಹತ್ವವನ್ನು ಅರ್ಥೈಸಿಕೊಂಡು ಅದರ ಸಮಗ್ರ ಓದುವಿಕೆಯೆಡೆಗೆ ವಿದ್ಯಾರ್ಥಿಗಳು, ಯುವ ಸಮುದಾಯ ಮುಂದಾಗಬೇಕು ಎಂದರು.  

ಮಂಗಳೂರು ವಿವಿ ಕುಲಪತಿ ಪ್ರೊ. ಪಿ‌.ಎಲ್. ಧರ್ಮ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಜನಾಂಗದ ಬೆಳವಣಿಗೆಯಲ್ಲಿ ಭಾಷೆಯ ಪಾತ್ರ ಮಹತ್ತರವಾದುದು. ವಸಾಹಾತುಶಾಹಿ ವ್ಯವಸ್ಥೆಯ ಆಡಳಿತದಲ್ಲಿ ಭಾಷೆಯನ್ನೇ ಪ್ರಮುಖ ಮಾಧ್ಯಮವನ್ನಾಗಿ ಮಾಡಿ, ಅನೇಕ‌ ಸ್ಥಳೀಯ ಭಾಷೆಗಳನ್ನು  ದುರ್ಬಲವನ್ನಾಗಿ ಮಾಡಲಾಗಿತ್ತು. ಆಫ್ರಿಕಾದಲ್ಲೂ ಕೂಡಾ ಆಂಗ್ಲ ಭಾಷೆಯ ವ್ಯಾಮೋಹದಿಂದ ಅನೇಕ ಆದಿವಾಸಿ ಭಾಷೆಗಳು ಮರೆಯಾದವು. ಭಾರತದಲ್ಲಿ ಕೂಡಾ‌ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.  ಭಾರತದಲ್ಲಿರುವ ಅನೇಕ ಭಾಷೆಗಳನ್ನು  ಸಂರಕ್ಷಿಸುವ, ಪರಂಪರೆಯನ್ನು ಗಟ್ಡಿಗೊಳಿಸುವ, ಚರಿತ್ರೆಯನ್ನು ಪುನರ್ ರಚಿಸುವ ಕೆಲಸ ಆಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ  ಮಂಗಳೂರು ವಿವಿ ಕುಲಸಚಿವರಾದ ಸಂತೋಷ್ ಬಿ. ಜಗಲಸಾರ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಜಂಟಿ ನಿರ್ದೆಶಕರಾದ ನಿರ್ಮಲಾ ಮಠಪತಿ,‌ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ವಿಕಾಸ ಅಧ್ಯಕ್ಷರಾದ ಡಾ. ಚಿನ್ನಸ್ವಾಮಿ, ಕಲಾ‌ನಿಕಾಯದ ಡೀನ್ ಪ್ರೊ. ಸೋಮಣ್ಣ ಹೊಂಗಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಅವರು ಸ್ವಾಗತಿಸಿದರು. ಉಪನ್ಯಾಸಕ ಡಾ. ಯಶುಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ  ಹಳೆಗನ್ನಡ ವಾಚನಕ್ರಮ ಪದಾರ್ಥ ನಿರ್ಣಯ ತಾತ್ವಿಕ ಹಾಗೂ ಪ್ರಾಯೋಗಿಕ ಆಯಾಮಗಳು ವಿಷಯದ ಕುರಿತು ಪ್ರೊ.ರಾಧಾಕೃಷ್ಣ ಬೆಳ್ಳೂರು, ಹಳಗನ್ನಡದ ವ್ಯಾಖ್ಯಾನದ ವಿಧಾನಗಳ ಕುರಿತು ಡಾ.ಪಾದೇಕಲ್ಲು ವಿಷ್ಣುಭಟ್,  ಹಳಗನ್ನಡ ಅಧ್ಯಯನದ ಪೂರಕ ಸಾಮಗ್ರಿಗಳ ಕುರಿತು ಪ್ರೊ.ತಮಿಳ್ ಸೆಲ್ವಿ ಅವರು ವಿಚಾರ ಮಂಡಿಸಿದರು.

ಕಾರ್ಯಕ್ರಮದಲ್ಲಿ ಡಾ. ಶ್ರೀಕೃಷ್ಣ ಸುಣ್ಣಂಗುಳಿ, ದೀವಿತ್ ಎಸ್. ಕೋಟ್ಯಾನ್, ಶ್ರೀವಾಣಿ ಕಾಕುಂಜೆ, ಮೇಧಾ ನಾಯರ್ಪಳ್ಳ ಇವರಿಂದ ಹಳಗನ್ನಡ ಪದ್ಯಗಳ ಗಮಕ ಪ್ರಸ್ತುತಿಯು ನಡೆಯಿತು.

ದೇಶದ ಅಭಿವೃದ್ಧಿಯ ಮಾನದಂಡ ಕೇವಲ ಆರ್ಥಿಕ ಸ್ಥಿತಿಗತಿಯಲ್ಲ. ಅದು ಅಲ್ಲಿಯ ಸಂಸ್ಕೃತಿಯ ಮೇಲೆ ನಿಂತಿದೆ. ಈ ನಿಟ್ಟಿನಲ್ಲಿ ಭಾರತದ ಸಂಸ್ಕೃತಿ ವಿಶ್ವ ಮಾನ್ಯತೆಯನ್ನು ಪಡೆದಿದೆ. ಕರ್ನಾಟಕವೂ ಸಾಂಸ್ಕೃತಿಕವಾಗಿ ಅನೇಕ ಕೊಡುಗೆಗಳನ್ನು ನೀಡಿದೆ. ಇಂದಿನ ಯುವ ಸಮುದಾಯಕ್ಕೆ ಹಳೆಗನ್ನಡದ ರುಚಿಯನ್ನು ತಿಳಿಯಪಡಿಸುವ ಪ್ರಯತ್ನಗಳು ಆಗಬೇಕು. ಓದಿನೆಡೆಗೆ ಅವರನ್ನು ಸೆಳೆಯುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article