ಜಾಗೃತಿಯಿಂದ ಆತ್ಮಹತ್ಯೆ ತಡೆಗಟ್ಟಲು ಸಾಧ್ಯ: ಡಾ. ರಮೀಲಾ ಶೇಖರ್
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣ ಹೆಚ್ಚಾಗುತ್ತಿದೆ. ಚಿಕ್ಕ ವಯಸ್ಸಿನ ಮಕ್ಕಳ ಮನಸ್ಸಿನಲ್ಲೂ ಅಳವಾದ ನೋವಿರುತ್ತದೆ. ಆ ನೋವನ್ನು ತಿಳಿಯಲು ವಿಫಲವಾದರೆ ಆ ಮಕ್ಕಳ ಸಾವನ್ನು ನೋಡಬೇಕಾಗುತ್ತದೆ. ಸಾಮಾನ್ಯವಾಗಿ ಉದ್ವೇಗ, ಒತ್ತಡ, ಮುಕ್ತ ಮಾತುಕತೆಗೆ ಇಲ್ಲದ ಅವಕಾಶ, ವೈಫಲ್ಯದ ಭಯ ಹೀಗೆ ಹಲವು ಕಾರಣಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವವರು ಸಾಮಾನ್ಯವಾಗಿ ಮುನ್ಸೂಚನೆ ನೀಡುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆ ಮತ್ತು ಸಹಾನುಭೂತಿ ಇರಬೇಕು ಎಂದು ತಿಳಿಸಿದರು.
15 ರಿಂದ 30ರ ವಯೋಮಾನದವರೇ ಹೆಚ್ಚಾಗಿ ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ. ಮಾನಸಿಕ ಒತ್ತಡಕ್ಕೆ ಒಳಗಾದವರ ಜೊತೆಗೆ ಆತ್ಮೀಯವಾಗಿ ಮಾತನಾಡುವ ತಾಳ್ಮೆ, ಮಾನಸಿಕ ಧೈರ್ಯ ತುಂಬುವುದು ಸೇರಿದಂತೆ ಹಾಸ್ಯ ಮಾಡದೇ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್, ಸಮಸ್ಯೆಯನ್ನು ಖುಷಿಯಿಂದ ಎದುರಿಸಬೇಕು. ಬದುಕಿನಲ್ಲಿ ಸಂತೋಷ ಅಥವಾ ದುಃಖ ಯಾವುದೂ ಶಾಶ್ವತವಲ್ಲ. ಆತ್ಮಹತ್ಯೆಯ ಆಲೋಚನೆ ಬಂದ ಮಾತ್ರಕ್ಕೆ ಜೀವನವನ್ನೇ ಮುಗಿಸಿಕೊಳ್ಳುವ ಹಂತಕ್ಕೆ ಹೋಗಬಾರದು. ಸಬಲ ಮತ್ತು ಶಾಂತಿಯುತ ಹೆಜ್ಜೆ ಹಾಕಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಸುರೇಶ್, ಲಿಖಿತಾ ಜಿ.ಎನ್. ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
