ಪೆರ್ನಾಜೆ ಶಾಲೆಗೆ ನಿರಾತಂಕ: ಶಿಕ್ಷಕ ಇಲಾಖೆಯ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಪುತ್ತೂರು: ಪುತ್ತೂರು ತಾಲೂಕಿನ ಪೆರ್ನಾಜೆ ಸೀತಾರಾಘವ ವಿದ್ಯಾವರ್ಧಕ ಸಂಘದಡಿಯಲ್ಲಿ ನಡೆಯುತ್ತಿರುವ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಕೊರತೆ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ಶಾಲಾ ಮಾನ್ಯತೆಯನ್ನು ರದ್ದುಗೊಳಿಸಿ ಆದೇಶ ನೀಡಿತ್ತು. ಇದೀಗ ಈ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಮಾಡಿದೆ. ಮತ್ತೆ ಈ ಶಾಲೆಯನ್ನು ನಡೆಸಲು ಅವಕಾಶ ಕಲ್ಪಿಸಿದೆ. ಆದರೆ ಇಲಾಖೆ ಶಾಲಾ ಮಕ್ಕಳಿಗೆ ನೀಡಬೇಕಾದ ಪಠ್ಯಪುಸ್ತಕ ನೀಡುತ್ತಿಲ್ಲ. ಸ್ಥಳೀಯ ಕೆಲ ಶಾಲೆಗಳು ಮುಖ್ಯಸ್ಥರು ಮಕ್ಕಳ ಟೀಸಿ ನೀಡುತ್ತಿಲ್ಲ ಎಂದು ಸೀತಾರಾಘವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಬಿ.ಟಿ. ಅವಟಿ ಆರೋಪ ಮಾಡಿದರು.
ಅವರು ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೆದ ಎಪ್ರಿಲ್ ತಿಂಗಳಲ್ಲಿ ಶಿಕ್ಷಣ ಇಲಾಖೆಯು ಶಾಲೆಯ ಮಾನ್ಯತೆಯನ್ನು ರದ್ದು ಮಾಡಿದ್ದು, ಅದರ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಹಾಕಲಾಗಿದ್ದು, ಕೋರ್ಟ್ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆಯನ್ನು ನಡೆಸಿ ಶಾಲೆಯ ಸ್ಥಿತಿಯನ್ನು ಅರಿಯಲು ಕೋರ್ಟ್ ಕಮೀಷನರ್ ನೇಮಿಸಿ ವರದಿ ತರಿಸಿಕೊಂಡಿತ್ತು. ಆ ವರದಿಯ ಆಧಾರದಲ್ಲಿ ಮಾನ್ಯತೆ ರದ್ದು ಮಾಡಿದ್ದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿ ಮಾಡಿ ಶಾಲೆ ನಡೆಸಲು ಅನುಮತಿ ನೀಡಿದೆ.
ಪ್ರಸ್ತುತ ಶಾಲೆಯಲ್ಲಿ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ನ್ಯಾಯಾಲಯದ ಆದೇಶದೊಂದಿಗೆ ಇಲಾಖೆಗೆ ಪತ್ರ ಬರೆದು ಪಠ್ಯಪುಸ್ತಕ ನೀಡುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಇಲಾಖೆಯು ಈವರೆಗೆ ಪುಸ್ತುಗಳನ್ನು ನೀಡಿಲ್ಲ. ಜತೆಗೆ ವಿವಿಧ ಶಾಲೆಗಳಿಗೆ ನಮ್ಮ ಶಾಲೆಗೆ ವಿದ್ಯಾರ್ಥಿಗಳು ಆಗಮಿಸಿದ್ದು, ಅದರಲ್ಲಿ ಪುತ್ತೂರು, ಸುಳ್ಯ ಭಾಗದ ಕೆಲವು ಶಾಲೆಗಳ ಮುಖ್ಯಸ್ಥರು ಟಿಸಿಯನ್ನೂ ನೀಡದೆ ಸತಾಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ವಿರುದ್ಧವೂ ಹೈಕೋರ್ಟ್ ನಲ್ಲಿ ದಾವೆ ಹೂಡಲಾಗುತ್ತದೆ.
ಜತೆಗೆ ಶಾಲೆಗೆ ಮಂಜೂರಾಗಿರುವ ಇಬ್ಬರು ಶಿಕ್ಷಕರು ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನೂ ನಮ್ಮ ಶಾಲೆಯ ಕರ್ತವ್ಯ ಹಾಜರಾಗಲು ಇಲಾಖೆಯ ಮೂಲಕ ತಿಳಿಸಲಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗೋಪಾಡ್ಕರ್, ನಿರ್ದೇಶಕ ಜಯಪ್ರಕಾಶ್ ಉಪಸ್ಥಿತರಿದ್ದರು.