‘ಗೋ ಸಮ್ಮಾನ್ ಆಹ್ವಾನ್ ಅಭಿಯಾನ್’

‘ಗೋ ಸಮ್ಮಾನ್ ಆಹ್ವಾನ್ ಅಭಿಯಾನ್’


ಮಂಗಳೂರು: ಭಾರತೀಯ ಗೋ ತಳಿಯ ರಕ್ಷಣೆ ಮತ್ತು ಗೋಹತ್ಯೆ ನಿಷೇಧ ಹಾಗೂ ಗೋಮಾತೆಗೆ ರಾಷ್ಟ್ರೀಯ ಗೌರವ ಮತ್ತು ಸ್ಥಾನಮಾನ ಒದಗಿಸುವುದರ ಜೊತೆಗೆ ಗ್ರಾಮ ಮಟ್ಟದಲ್ಲಿ ಗೋ ಶಾಲೆ ಮತ್ತು ಗೋ ಸೇವಾ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರಾಷ್ಟ್ರವ್ಯಾಪಿ ನಡೆಯುತ್ತಿರುವ ‘ಗೋ ಸಮ್ಮಾನ್ ಆಹ್ವಾನ್ ಅಭಿಯಾನ್ ’ ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಾಲಯ ಗುರುವಾರ ಕದ್ರಿಯ ವಿಶ್ವಹಿಂದೂ ಪರಿಷದ್ ಕಾರ್ಯಾಲಯ ವಿಶ್ವಶ್ರೀಯಲ್ಲಿ ಉದ್ಘಾಟನೆಗೊಂಡಿತು.

ಗೋಪೂಜೆಯ ಮೂಲಕ ಕಾರ್ಯಾಲಯ ಉದ್ಘಾಟಿಸಿದ ಕೊಂಡೆವೂರು ಕ್ಷೇತ್ರದ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಗೋಹತ್ಯೆ ಸಂಪೂರ್ಣವಾಗಿ ನಿಷೇಧವಾಗುವುದರೊಂದಿಗೆ ಗೋವು ರಾಷ್ಟ್ರ ಮಾತೆಯಾಗಬೇಕು. ಈ ನಿಟ್ಟಿನ ಹೋರಾಟಕ್ಕೆ ಎಲ್ಲಾ ಸ್ವಾಮೀಜಿಗಳು ಸಾಥ್ ನೀಡುವುದಾಗಿ ತಿಳಿಸಿದರು.

ತಾಯಿಯನ್ನು ಹೇಗೆ ಪ್ರೀತಿಸುತ್ತೇವೆಯೋ ಅದೇ ರೀತಿ ಸಮಸ್ತ ಹಿಂದೂ ಬಾಂಧವರು ಗೋ ಮಾತೆಯನ್ನು ತಾಯಿಯಂತೆ ಪ್ರೀತಿಸಬೇಕು. ಗೋಮಾತೆಯ ರಕ್ಷಣೆಯ ಕುರಿತ ಹೋರಾಟಕ್ಕೆ ಜನತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ದೇಶದಲ್ಲಿ 31 ಕೋಟಿ ಸಹಿ ಸಂಗ್ರಹ ಗುರಿ: ಶರಣ್

ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ದೇಶದಲ್ಲಿ ಗೋ ಹತ್ಯೆ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ಮೂರನೇ ಹಂತದ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ 31 ಕೋಟಿಗೂ ಅಧಿಕ ಸಹಿ ಸಂಗ್ರಹ ಅಭಿಯಾನದ ಗುರಿ ಹೊಂದಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಲಕ್ಷ ಸಹಿ ಸಂಗ್ರಹದ ಗುರಿ ಇದೆ ಎಂದರು.

ಗೋವುಗಳ ರಕ್ಷಣೆಗೆ ವಿಹಿಂಪ ಬಜರಂಗದಳ ಪಣತೊಟ್ಟಿದ್ದು, ಇತರ ಹಿಂದೂ ಸಂಘಟನೆಗಳು ಕೂಡ ಕೈಜೋಡಿಸುತ್ತಿವೆ. ಹೀಗಾಗಿ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷದಷ್ಟು ಗೋವುಗಳ ರಕ್ಷಣೆಯಾಗುತ್ತಿದೆ. ದೇಶದಲ್ಲಿ  ಗೋವಿನ ರಕ್ಷಣೆಗೆ ಸೂಕ್ತ ಗೋ ಸೇವಾ ಸಚಿವಾಲಯ ಆಗಬೇಕಾದ ಅನಿವಾರ್ಯತೆ ಇದೆ ಎಂದವರು ಹೇಳಿದರು.

ಸ್ವಾಮೀಜಿಗಳಿಂದ ಆಮರಣಾಂತ ಉಪವಾಸ:

ಎರಡು ಹಂತಗಳಲ್ಲಿ ಸಹಿ ಸಂಕ್ರಹ ಅಭಿಯಾನ ನಡೆದರೂ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯದೇ ಇರುವುದರಿಂದ ಮೂರನೇ ಹಂತದ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಬಾರಿಯೂ ಸ್ಪಂದನೆ ಸಿಗದಿದ್ದಲ್ಲಿ ದೆಹಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುವುದರೊಂದಿಗೆ ಸ್ವಾಮೀಜಿಗಳು ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಲಿದ್ದಾರೆ ಎಂದು ಶರಣ್ ಪಂಪ್‌ವೆಲ್ ತಿಳಿಸಿದರು.

ದ.ಕ. ಜಿಲ್ಲೆಯಲಿ ಸಮಸ್ತ ಹಿಂದೂಪರ ಸಂಘಟನೆಗಳು ಹಾಗೂ ಮಠ ಮಂದಿರಗಳ ಸಹಯೋಗದಲ್ಲಿ ಆಂದೋಲನದ ರೀತಿಯಲ್ಲಿ ಈ ಅಭಿಯಾನ ನಡೆಯಲಿದೆ. ಅಭಿಯಾನದಲ್ಲಿ ಸಂಗ್ರಹಿಸಿದ ಸಹಿ ಪತ್ರಗಳನ್ನು ಡಿ.17ರಂದು ಮೂರು ಲಕ್ಷಕ್ಕೂ ಹೆಚ್ಚು ಗೋ ಪ್ರೇಮಿಗಳು ಸಮಾವೇಶ ನಡೆಸಿ ರಾಜ್ಯಪಾಲರಿಗೆ ಸಲಿಸಲಿದ್ದಾರೆ. ಜಿಲ್ಲೆಯಿಂದ 10 ಸಾವಿರಕ್ಕೂ ಅಧಿಕ ಗೋ ಸೇವಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಶರಣ್ ಪಂಪ್‌ವೆಲ್ ತಿಳಿಸಿದರು.

ಗಣೇಶೋತ್ಸವ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಪ್ರಮಾಣದಲ್ಲಿ ಅಭಿಯಾನಕ್ಕೆ ,ಆಲನೆ ನೀಡಲಾಗುವುದು. ಪ್ರತಿ ಗಣೇಶೋತ್ಸವಗಳಲ್ಲಿ ಕಾರ್ಯಕರ್ತರು ವಿಘ್ನ ವಿನಾಶಕನಿಗೆ ವಿಶೇಷ ಪ್ರಾರ್ಥನೆ, ಸಂಕಲ್ಪ, ಪೂಜೆ ಸಲ್ಲಿಸಿ ಅಭಿಯಾನ ಆರಂಭಿಸಲಿದ್ದಾರೆ ಎಂದು ಅಭಿಯಾನದ ಜಿಲ್ಲಾ ಸಹ ಪ್ರಭಾರಿ ಅಶೋಕ್ ಇಳಂತಿಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಜಿಲ್ಲಾ ಪ್ರಭಾರಿ ಶಿವಾನಂದ ಮೆಂಡನ್, ಜಿಲ್ಲಾ ಸಂಯೋಜಕ ಉದಯ ಶಂಕರ್, ಉಡುಪಿ ಪ್ರಭಾರಿ ಗಜೇಂದ್ರ, ವಿಹಿಂಪ ದ.ಕ. ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಪ್ರಮುಖರಾದ ಗೋಪಾಲ ಕುತ್ತಾರ್, ರಮೇಶ್ ಭಟ್ ಸರವು, ಭರತ್ ಮಂಜನಾಡಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article