ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ: ದೇಣಿಗೆ ಹಸ್ತಾಂತರ
Monday, September 28, 2026
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ (ಮಾಜಿ ಸರ್ಕಾರಿ ಕಾಲೇಜು) ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಸೆ.27 ರಂದುನಡೆಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿ ಹಾಗೂ ಹಿರಿಯ ವಕೀಲ ಲೋಹಿದಾಸ್ ಅವರು, ಕಾಲೇಜಿನಲ್ಲಿ ನಡೆಯುತ್ತಿರುವ 'ಒಂದು ಹೊತ್ತು ಕೈತುತ್ತು'- ಬಡ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದ ಯೋಜನೆ'ಗಾಗಿ ತಾವು ಸಂಗ್ರಹಿಸಿದ 50,000 ರೂ. ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು.
ಲೋಹಿದಾಸ್ ಅವರು ಇಲ್ಲಿಯವರೆಗೆ ತಾವೊಬ್ಬರೇ ಸುಮಾರು 5 ಲಕ್ಷ ರೂ. ಮೊತ್ತವನ್ನು ಈ ಯೋಜನೆಗಾಗಿ ಸಂಗ್ರಹಿಸಿ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅದೇ ರೀತಿ ಕಾಲೇಜಿನ ಮತ್ತೋರ್ವ ಹಿರಿಯ ಹಳೆ ವಿದ್ಯಾರ್ಥಿ, ಕೆನರಾ ಬ್ಯಾಂಕ್ ನ ನಿವೃತ್ತ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆದ ಪ್ರಭಾಕರ್ ಪೈ ಅವರು ಈ ಯೋಜನೆಗೆ 25,000 ರೂ. ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ದಾನಿಗಳಿಗೆ ಕಾಲೇಜಿನ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಅವರು ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಮಂಗಳೂರು ವಿಶ್ವವಿದ್ಯಾಲಯದ ಅಂತರ-ಕಾಲೇಜು ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲು 3 ಲಕ್ಷ ರೂ.ವನ್ನು ಕೊಡುಗೆಯಾಗಿ ನೀಡಿದರು. ಮಾತ್ರವಲ್ಲ ಪ್ರತಿ ವರ್ಷ ವಿದ್ಯಾರ್ಥಿ ವೇತನಕ್ಕಾಗಿ 1 ಲಕ್ಷ ರೂ.ವನ್ನು ಕೊಡುಗೆಯಾಗಿ ನೀಡುತ್ತಾ ಬರುತ್ತಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮದಾಸ ಗೌಡ ಎಸ್. ಅವರು ವಹಿಸಿ, ಮಾತನಾಡಿ, ಈ ವರ್ಷದ ಕಾರ್ಯಕ್ರಮದಲ್ಲಿ ಅನೇಕ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಹೆಮ್ಮೆಯ ವಿಷಯ ಎಂದು ಹರ್ಷ ಅಭಿವ್ಯಕ್ತಪಡಿಸಿದರು.
ಸುಭಾಶ್ಚ್ ಚಂದ್ರ ಕಣ್ವತೀರ್ಥ ಅವರು ಕಳೆದ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು. ಮೋಹನ್ ರಾವ್ ಯು. ಅವರು ಲೆಕ್ಕಪತ್ರಗಳನ್ನು ಮಂಡಿಸಿದರು.
ಉಪಾಧ್ಯಕ್ಷ ಡಿ. ಶ್ರೀನಿವಾಸ ನಾಯಕ್ ಅವರು ಅವರು ವಂದಿಸಿದರು.






