63ನೇ ವರ್ಷದ ಮೂಡುಬಿದಿರೆ ಸಾವ೯ಜನಿಕ ಶ್ರೀ ಗಣೇಶೋತ್ಸವಕ್ಕೆ ಚಾಲನೆ
ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಗಣೇಶೋತ್ಸವವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಶ್ರದ್ಧಾ-ಭಕ್ತಿಯಿಂದ ಕಳೆದ 63 ವರ್ಷಗಳಿಂದ ಸಮಾಜ ಮಂದಿರದಲ್ಲಿ ನಡೆಯುತ್ತಿರುವ ಈ ಗಣೇಶೋತ್ಸವವು ಇದೀಗ ಮೂಡುಬಿದಿರೆ ಪರಿಸರದ ಅತಿದೊಡ್ಡ ಜಾತ್ರೆಯಾಗಿ ಮಾರ್ಪಟ್ಟಿದೆ. ಸಾರ್ವಜನಿಕ ಗಣಪತಿಯಲ್ಲಿ ಬೇಡಿಕೊಂಡ ಪ್ರಾರ್ಥನೆಗಳು ಶೀಘ್ರವೇ ಸಿದ್ಧಿಸುತ್ತವೆ ಎಂಬುದು ಭಕ್ತರ ಅಪಾರ ನಂಬಿಕೆಯಾಗಿದೆ. ಐದು ದಿನಗಳ ಕಾಲ ನಿರಂತರವಾಗಿ ನಡೆಯುವ ಈ ಉತ್ಸವದಲ್ಲಿ ಜನಸಾಗರವೇ ಹರಿದುಬರುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಸಚಿವ, ಸಮಾಜಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್, ಟ್ರಸ್ಟಿಗಳಾದ ಚೌಟರ ಅರಮನೆಯ ಕುಲದೀಪ ಎಂ., ಶ್ರೀಪತಿ ಭಟ್, ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷೆ ಜಯಶ್ರೀ ಅಮರನಾಥ್ ಶೆಟ್ಟಿ, ಕೆ. ಅಮರನಾಥ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಅಮರಶ್ರೀ ಅಮರಾನಾಥ್ ಶೆಟ್ಟಿ ಮತ್ತಿತರರಿದ್ದರು.
ಸಮಿತಿಯ ವತಿಯಿಂದ ಗಣಪತಿಗೆ ಚಿನ್ನದ ಜನಿವಾರ, ಬೆಳ್ಳಿಯ ಪರಿಕರಗಳನ್ನು ಸಮಪಿ೯ಸಲಾಯಿತು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ. ಸ್ವಾಗತಿಸಿದರು. ಟ್ರಸ್ಟ್ ನ ಅಧ್ಯಕ್ಷರಾದ ನಾರಾಯಣ ಪಿ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ಪೈ ವಂದೇ ಮಾತರಂ ಗೀತೆ ಹಾಡಿದರು. ಸಮಿತಿಯ ಸಂಚಾಲಕ ರಾಜಾರಾಮ್ ನಾಗರಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಾನೂನು ಸಲಹೆಗಾರ ಚೇತನ್ ಕುಮಾರ್ ಶೆಟ್ಟಿ ವಂದಿಸಿದರು.
