ಮೂಡುಬಿದಿರೆ ಸುದರ್ಶನ್ ಜೈನ್ ಕೊಲೆ: ನ್ಯಾಯಾಲಯದ ಆವರಣದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪೊಲೀಸರ ಬಲೆಗೆ
ಮೂಡುಬಿದಿರೆಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಸುದರ್ಶನ್ ಜೈನ್ ಎಂಬವರನ್ನು ಮನೆಯ ಜಾಗ ಮತ್ತು ಹಣದ ವಿಷಯದಲ್ಲಿ ಆತನ ಸಹೋದರನೇ ಆಗಿರುವ ಸುಧೀರ್ ಜೈನ್ ಎಂಬಾತ ತನ್ನ ಸ್ನೇಹಿತರ ಜತೆ ಸೇರಿ 2018 ರಲ್ಲಿ ಕೊಲೆ ನಡೆಸಿದ್ದ ಈ ಪ್ರಕರಣದಲ್ಲಿ ಸುಧೀರ್ ಜೈನ್ ಸಹಿತ ಸಿದ್ದಕಟ್ಟೆಯ ಸಂದೀಪ್ ಶೆಟ್ಟಿ, ಆರಂಬೋಡಿಯ ಬಾಲರಾಜ್,ಪ್ರಭಾಕರ್ ಹಾಗೂ ಪ್ರಸಾದ್ ಆರೋಪಿಯಾಗಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಸೆ.22 ರಂದು ನಡೆದಿದ್ದ ವಿಚಾರಣೆಗೆ ಈ ಐದು ಮಂದಿ ಆರೋಪಿಗಳೂ ಹಾಜರಾಗಬೇಕಿತ್ತು.ಹಿಂದಿನ ವಿಚಾರಣೆಗೆ ಪ್ರಸಾದ್ ಹಾಜರಾಗದೆ ಇದ್ದುದರಿಂದ ಆತನಿಗೆ ವಾರಂಟ್ ಜಾರಿಗೊಳಿಸಲಾಗಿತ್ತು. ಆರೋಪಿಯಾಗಿದ್ದ ಮೂಡುಬಿದಿರೆ ಪ್ರಸಾದ್ ಎಂಬಾತ ನ್ಯಾಯಾಲಯದ ಆವರಣದಿಂದ ಪೊಲೀಸರಿಂದ ತಪ್ಪಿಸಿಕೊಂಡಿದ್ದ.
ಸೆ.22 ಕ್ಕೆ ಐದು ಮಂದಿ ಆರೋಪಿಗಳ ಪೈಕಿ ನಾಲ್ಕು ಮಂದಿಯ ವಕೀಲರು ಇದ್ದು ಪ್ರಸಾದ್ ಪರವಾಗಿ ವಕೀಲರು ಇರಲಿಲ್ಲ. ಹೀಗಾಗಿ ಆತನನ್ನು ನ್ಯಾಯಾಧೀಶರು ಪೊಲೀಸ್ ಕಸ್ಟಡಿಗೊಪ್ಪಿಸಿದ್ದರು.
ಬಳಿಕ ಆತನನ್ನು ರಿಮಾಂಡ್ ವಾರಂಟ್ ನೊಂದಿಗೆ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲು ಪೊಲೀಸರು ತಯಾರಿ ನಡೆಸುತ್ತಿದ್ದಂತೇ ಆತ ಕೋರ್ಟ್ ಸಂಕೀರ್ಣದಲ್ಲಿರುವ ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಹೇಳಿ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ.ಈ ಬಗ್ಗೆ ಬಂದರು ಠಾಣೆಯಲ್ಲಿ ದೂರು ನೀಡಲಾಗಿತ್ತು.
ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆಗಿಳಿದ ಮೂಡುಬಿದಿರೆ ಪೊಲೀಸರು ಸೆ.23 ಆತನನ್ನು ಸಿದ್ದಕಟ್ಟೆಯ ಆರಂಬೋಡಿ ಎಂಬಲ್ಲಿ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತ ಮತ್ತೆ ಜೈಲು ಸೇರಿದ್ದಾನೆ.
ಮೂಡುಬಿದಿರೆ ಇನ್ಸ್ಪೆಕ್ಟರ್ ರಾಜೇಂದ್ರ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಮುಹಮ್ಮದ್ ಇಕ್ಬಾಲ್, ನಾಗರಾಜ್ ಹಾಗೂ ರೋಹಿತ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.